ಮುಂದುವರಿದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ: ಸಹಿ ಸಂಗ್ರಹ ಮೂಲಕ ಸರ್ಕಾರಕ್ಕೆ ಒತ್ತಾಯ

Update: 2021-07-13 18:53 GMT

ಮೈಸೂರು,ಜು.13: ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ 16ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮೈಸುರು ಕನ್ನಡ ವೇದಿಕೆ ವತಿಯಿಂದ ಸಹಿ ಸಂಗ್ರಹ ಚಳವಳಿ ನಡೆಸಲಾಯಿತು.

ಎನ್ ಟಿಎಂ ಶಾಲೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸ್ಮಾರಕದ ಹೆಸರಿನಲ್ಲಿ 140 ವರ್ಷ ಇತಿಹಾಸವುಳ್ಳ ಕನ್ನಡದ ಶಾಲೆಯನ್ನು ಬಲಿಪಶು ಮಾಡುವುದು ಎಷ್ಟು ಸಮಂಜಸವೆಂದು ಪ್ರಶ್ನಿಸಿದರಲ್ಲದೇ   ಮುಖ್ಯಮಂತ್ರಿಗಳಿಗೆ ಸಹಿ ಸಂಗ್ರಹ ಚಳುವಳಿ ಮೂಲಕ ಶಾಲೆ ಉಳಿಸುವಂತೆ ಒತ್ತಾಯಿಸಿದರು.

ಕನ್ನಡ ಶಾಲೆಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಾಣ ಬೇಡ.  140 ವರ್ಷ ಇತಿಹಾಸವಿರುವ ಕನ್ನಡ ಶಾಲೆಯನ್ನು ಮುಚ್ಚಿ ಅದರ ಸಮಾಧಿಯ ಮೇಲೆ ಸ್ಮಾರಕಕ್ಕೆ ಮುಂದಾಗಿರುವುದು ರಾಷ್ಟ್ರದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ರಾಮಕೃಷ್ಣ ಮಠಕ್ಕೆ ಶೋಭೆ ತರುವಂತದ್ದಲ್ಲ. ಮೂಢನಂಬಿಕೆ ಕಂದಾಚಾರ, ದಾರಿದ್ರ್ಯ, ಬಡತನ ಇವೆಲ್ಲಕ್ಕೂ ಪರಿಹಾರ ಶಿಕ್ಷಣ ಎಂಬ ಭವಿಷ್ಯದ ಪರಿಕಲ್ಪನೆ  ಕಂಡಿದ್ದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದ.  ಯಾವ ದೇಶ ಶಿಕ್ಷಣದಲ್ಲಿ ಮುಂದೆ ಬರುತ್ತದೆಯೋ , ಆ ದೇಶ ಸಂಪದ್ಭರಿತ ವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಶಿಕ್ಷಣ ಎಂಬ ಬುನಾದಿಯ ಮೇಲೆ ಆರೋಗ್ಯಯುತ ಸಮಾಜವನ್ನು ಕಟ್ಟಬಹುದೇ ವಿನಹ ಸ್ಮಾರಕದ ಮೇಲಲ್ಲ. ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಕ್ಷರ ದಾಸೋಹ, ಅನ್ನದಾಸೋಹ ,ಮೂಲಕ ಬಡವರ ಜಾತಿ,ಧರ್ಮಗಳ ಭೇದವಿಲ್ಲದೆ ಶಿಕ್ಷಣವನ್ನು ನೀಡುವ ಮೂಲಕ ಸಿದ್ದಗಂಗಾ ಶ್ರೀಗಳು ಇಡೀ ರಾಷ್ಟ್ರಕ್ಕೆ ಮಾದರಿಯಾದರು.

ದುರಂತವೆಂದರೆ ರಾಮಕೃಷ್ಣ ಮಠಕ್ಕೆ ಏಕೆ ಬುದ್ಧಿ ಬರಲಿಲ್ಲ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಮಠವಾಗಲಿ, ಸ್ಮಾರಕ ಹಿತೈಷಿಗಳಾಗಲಿ, ಸ್ವಾಮಿ ವಿವೇಕಾನಂದರ  ಪರಿಕಲ್ಪನೆಯಂತೆ ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ಮಾರಕವನ್ನು ಬದಿಗಿಟ್ಟು ಕನ್ನಡ ಶಾಲೆಗೆ ಪುನರುಜ್ಜೀವನ  ನೀಡುವ ಮೂಲಕ ಹೃದಯವಂತ ಕನ್ನಡಿಗರ  ಮನಸ್ಸನ್ನು ಗೆಲ್ಲಲಿ. ರಾಮಕೃಷ್ಣ ಆಶ್ರಮದವರು ಸಂಘರ್ಷವನ್ನು ಬಿಟ್ಟು ಸಾಮರಸ್ಯ ಮೂಲಕ ಕನ್ನಡ ಶಾಲೆಯನ್ನು ಉಳಿಸಲಿ. ಸ್ವಾಮಿ ವಿವೇಕಾನಂದರ ಅನುಯಾಯಿಗಳಾದ ರಾಷ್ಟ್ರಕವಿ ಕುವೆಂಪು ಆಸೆಯಂತೆ ಕನ್ನಡ ಶಾಲೆ ನಿರ್ಮಾಣವಾಗಲಿ ಶಾಲೆಗೆ ಕಾರಣಕರ್ತರಾದ ರಾಜ ವಂಶಸ್ಥರಿಗೆ ಗೌರವಸಿಗಲಿ ಎಂದು ಒತ್ತಾಯಿಸಿದರು.

ಈ ಸಂದರ್ಭ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ,ಸಾಹಿತಿ ಬನ್ನೂರು ಕೆ.ರಾಜು,ಬೋಗಾದಿ ಸಿದ್ದೇಗೌಡ,ಪ್ಯಾಲೇಸ್ ಬಾಬು,ಗೋಪಿ,ಬೀಡಾ ಬಾಬು,ಸ್ವಮಿ ಗೈಡ್, ಅರವಿಂದ್, ಮದನ್,ಮಾಲಿನಿ,ಕಾವೇರಮ್ಮ,ರೇಖಾ,ಮಾದಪ್ಪ,ಗೀರಿಶ್,ಶ್ರೀನಿವಾಸ,ಮಹದೇವಸ್ವಾಮಿ,ಸಿದ್ದಪ್ಪಎಲ್ ಐಸಿ, ಗೋವಿಂದರಾಜು,ಕಪನಿಗೌಡ,ನಾಗರಾಜ್,ಶಿವಪ್ಪ,ಕಿರಣ್,ಬಸವರಾಜು,ಯೋಗಿ, ಮಾಜಿ ಮೇಯರ್ ಪುರುಷೋತ್ತಮ್, ಹೋರಾಟಗಾರ ಪ.ಮಲ್ಲೇಶ, ವಿವಿಧ ಸಂಘಟನೆಗಳ ಮುಖಂಡರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News