ಮಡಿಕೇರಿ: ತೀವ್ರ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳ ಸುಧಾರಣೆಗೆ ಶ್ರಮಿಸಿ: ಜಿಲ್ಲಾಧಿಕಾರಿ ಸೂಚನೆ

Update: 2021-07-14 17:46 GMT

ಮಡಿಕೇರಿ ಜು.14 : ಜಿಲ್ಲೆಯಲ್ಲಿ ತೀವ್ರ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳ ಸುಧಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.  

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ತೀವ್ರ ಅಪೌಷ್ಠಿಕ 25 ಮಕ್ಕಳು ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳು 295 ಇದ್ದು, ಈ ಸಂಬಂಧ ಮಕ್ಕಳ ಅಪೌಷ್ಠಿಕತೆ ಸುಧಾರಣೆ ಮಾಡುವಲ್ಲಿ ತುರ್ತು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.   

ಸರ್ಕಾರದ ಮಾರ್ಗಸೂಚಿಯಂತೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕು. ಪ್ರತೀ ತಿಂಗಳು ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಸಬೇಕು. ಜಿಲ್ಲೆಯಲ್ಲಿ ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ಹೆಚ್ಚಿನ ಶ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಎಲ್ಲಾ ಕಡೆಗಳಲ್ಲಿ ಸ್ವಂತ ಕಟ್ಟಡ ಇರಬೇಕು. ನಿವೇಶನ ಬೇಕಿದ್ದಲ್ಲಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರವಿಂದ ಬಾಬು ಅವರು ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯಡಿ 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸಲಾಗುತ್ತದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ಪೂರೈಸಲಾಗುತ್ತದೆ. ಮಕ್ಕಳು ಮತ್ತು ತಾಯಂದಿರಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಚಟುವಟಿಕೆ ನಡೆಸಲಾಗುತ್ತದೆ ಎಂದು ಅವರು ವಿವರಿಸಿದರು.  

6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಮತ್ತು 11 ರಿಂದ 14 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಕಿಶೋರಿಯರಿಗೆ ಪೂರಕ ಪೌಷ್ಠಿಕ ಆಹಾರ ವಿತರಿಸಲಾಗುತ್ತದೆ. ಕೋವಿಡ್-19 ಸಂದರ್ಭದಲ್ಲಿ ಇವರಿಗೆ ಪೌಷ್ಠಿಕ ಆಹಾರವನ್ನು ಮನೆ ತಲುಪಿಸಲಾಗುತ್ತಿದೆ ಎಂದರು. 
ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 6 ತಿಂಗಳಿನಿಂದ 3 ವರ್ಷದೊಳಗಿನ 15,959 ಮಕ್ಕಳು ಹಾಗೆಯೇ 3 ರಿಂದ 6 ವರ್ಷದೊಳಗಿನ 14,459 ಮಕ್ಕಳು ಇದ್ದಾರೆ. ಹಾಗೆಯೇ 3,422 ಗರ್ಭಿಣಿಯರು, 3,636 ಬಾಣಂತಿಯರು, 11 ರಿಂದ 14 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ 9 ಕಿಶೋರಿಯರಿಗೆ ಪೂರಕ ಪೌಷ್ಠಿಕ ಆಹಾರ ತಲುಪಿಸಲಾಗುತ್ತಿದೆ. ಪೂರಕ ಪೌಷ್ಠಿಕ ಆಹಾರ ವಿತರಣೆಯಲ್ಲಿ ಶೇ.93 ರಷ್ಟು ಸಾಧನೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರವಿಂದ ಬಾಬು ಅವರು ವಿವರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ತಪಾಸಣೆ. ವಿಟಮಿನ್ ಎ ಮಾತ್ರೆಗಳ ಪೂರೈಕೆ ಮತ್ತು ಗ್ರಾಮೀಣ ಆರೋಗ್ಯ ನೈರ್ಮಲ್ಯ ಸಮಿತಿ ಸಭೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ 871 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, ಇದರಲ್ಲಿ 869 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 749 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದೆ. 4 ಅಂಗನವಾಡಿ ಪಂಚಾಯಿತಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 33 ಅಂಗನವಾಡಿ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತವೆ. 4 ಮಹಿಳಾ ಮಂಡಲದಲ್ಲಿ, 10 ಶಾಲೆಗಳಲ್ಲಿ, 12 ಬಾಡಿಗೆ ರಹಿತ ಕಟ್ಟಡದಲ್ಲಿ, 57 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು. 
ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಅಪೌಷ್ಠಿಕ ಮಕ್ಕಳಿಗೆ ಹೆಚ್ಚಿನ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ  ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಮಕ್ಕಳ ತಜ್ಞ ವೈದ್ಯರು ಇದ್ದಲ್ಲಿ ಅಲ್ಲಿಯೂ ಸಹ ಪ್ರತ್ಯೇಕ ವ್ಯವಸ್ಥೆ ಮಾಡಲು ಅವಕಾಶವಿದೆ. ಸದ್ಯ ಕೋವಿಡ್-19 ಇರುವುದರಿಂದ ಯಾವುದೇ ಮಕ್ಕಳು  ದಾಖಲಾಗುತ್ತಿಲ್ಲ ಎಂದು ಅವರು ಹೇಳಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜು ಅವರು ಅಂಗನವಾಡಿ ಕಟ್ಟಡ  ಸಂಬಂಧಿಸಿದಂತೆ ಮಾಹಿತಿ ನೀಡಿದರು.

ಸಖಿ ಒನ್ ಸ್ಟಾಪ್ ಸೆಂಟರ್‍ನಡಿ ವೈದ್ಯಕೀಯ ನೆರವು ಹಾಗೂ ಸಮಾಲೋಚನೆ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ಕಾನೂನು ಸಲಹೆ ಹಾಗೂ ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಕಲ್ಪಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದರು. 

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ ಅವರು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. 

 ‘ಜಿಲ್ಲೆಯಲ್ಲಿ ಕಳೆದ ವರ್ಷ 48 ಮಕ್ಕಳು ಮತ್ತು 10 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ, 23 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, 12 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ, 6 ಮಂದಿ ಮಕ್ಕಳು ಕಾಣೆಯಾಗಿರುವುದು. ಹಾಗೆಯೇ 18 ಮಂದಿ ಮಹಿಳೆಯರ ಮೇಲೆ ವಿವಿಧ ರೀತಿಯ ಪ್ರಕರಣಗಳು ವರದಿಯಾಗಿರುವುದು ಆತಂಕ ಉಂಟು ಮಾಡುತ್ತದೆ ಎಂದು ಕೆ.ಡಿ.ದಯಾನಂದ ಅವರು ಹೇಳಿದರು.’  

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರಾದ ಮೀನಾ ಕುಮಾರಿ ಅವರು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಬೇಕು. ಆ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಜೊತೆಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.  

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ಮಾಹಿತಿ ನೀಡಿ ಸರ್ಕಾರ ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆ ಜಾರಿಗೊಳಿಸಿದ್ದು, ಕೋವಿಡ್-19 ಕಾರಣದಿಂದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ 3,500 ರೂ. ಆರ್ಥಿಕ ಸಹಾಯಧನ ನೀಡಲಾಗುತ್ತದೆ. ಜೊತೆಗೆ ಎಸ್‍ಎಸ್‍ಎಲ್‍ಸಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ನೀಡಲಾಗುತ್ತದೆ. ಆ ದಿಸೆಯಲ್ಲಿ ಜಿಲ್ಲೆಯಲ್ಲಿ 4 ಮಕ್ಕಳು ಕಂಡು ಬಂದಿದ್ದು, ತಲಾ 3,500 ರೂ. ಆರ್‍ಟಿಜಿಎಸ್ ಮಾಡಲಾಗಿದೆ ಎಂದರು.     
ಸಿಡಿಪಿಒಗಳಾದ ಅಣ್ಣಯ್ಯ, ರಾಜೇಶ್, ಆಹಾರ ಸುರಕ್ಷತಾ ಅಧಿಕಾರಿ ಡಾ.ಅನಿಲ್, ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಕಾರ್ಮಿಕ ಇಲಾಖಾ ಅಧಿಕಾರಿ ಅನಿಲ್ ಬಗಟಿ, ಪೌರಾಯುಕ್ತರಾದ ರಾಮದಾಸ್, ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News