ಸಹಕಾರಿ ಸಂಸ್ಥೆಗಳ ಸಂಕಟಗಳಿಗೆ ಪ್ರಮುಖ ಕಾರಣಗಳು

Update: 2021-07-14 19:30 GMT

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರವೂ ಸೇರಿದಂತೆ ಅನೇಕ ಭಾಗಗಳಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಂತಹ ಜನ ತಮ್ಮ ಹಣವನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಕೆಲವು ಬ್ಯಾಂಕ್‌ಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯವರ ಅನ್ಯಾಯ ಮತ್ತು ಸ್ವಾರ್ಥ, ಅಧಿಕಾರ ದುರುಪಯೋಗ ಪ್ರಮುಖ ಕಾರಣವಾಗಿದೆ. ಇದಲ್ಲದೆ ಇಷ್ಟೇ ಪ್ರಮುಖವಾಗಿ ಕೇಂದ್ರ ಸರಕಾರದ ನೋಟು ಅಮಾನ್ಯ, ಜಿಎಸ್‌ಟಿ ಪದ್ಧತಿಯ ಕೆಲವು ನಿಯಮಗಳು ಕಾರಣವಾಗಿವೆ. ಜೊತೆಗೆ ನ್ಯಾಯಾಲಯಗಳ ಆದೇಶಗಳು ಅದರಲ್ಲೂ ವಿಶೇಷವಾಗಿ ಹಸಿರು ಪೀಠದ ನ್ಯಾಯಾಲಯದ ಆದೇಶಗಳೂ ಬ್ಯಾಂಕಿನ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಬ್ಯಾಂಕ್‌ಗಳಿಂದ ದೊಡ್ಡ ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಪಡೆದಂತಹ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಯವರು, ಹೊಟೇಲ್‌ನವರು, ಬಿಲ್ಡರ್‌ಗಳು ಸಾಲವನ್ನು ಮರು ಪಾವತಿ ಮಾಡಲು ಆಗುತ್ತಿಲ್ಲ. ಕೇಂದ್ರ ಸರಕಾರದ ಆರ್ಥಿಕ ನೀತಿಗಳಿಂದ ಮತ್ತು ತೆರಿಗೆ ಪದ್ಧತಿಯಿಂದ ಹೊಸ ಹೊಸ ಕಾನೂನುಗಳಿಂದ ಎಲ್ಲ ಉದ್ಯಮಗಳು ನೆಲಕಚ್ಚಿವೆ, ನಷ್ಟದಲ್ಲಿವೆ, ಇಲ್ಲವೇ ಬಾಗಿಲು ಬಡಿದುಕೊಂಡಿವೆ. ಇದರ ಜೊತೆಗೆ ಕಳೆದ ಒಂದುವರೆ ವರ್ಷದ ಅವಧಿಯೊಳಗಿನ ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಕಾರಣದಿಂದ ಆರ್ಥಿಕವಾಗಿ ಎಲ್ಲಾ ವ್ಯವಸ್ಥೆಯೂ ದಿವಾಳಿಯಾಗಿದೆ.

2016ಕ್ಕೆ ಮೊದಲು ಹಸಿರು ಪೀಠದ ಕಲ್ಪನೆಯೇ ಇರಲಿಲ್ಲ. ಎಲ್ಲಾ ಬ್ಯಾಂಕ್‌ಗಳಲ್ಲಿ ಎಲ್ಲಾ ಹಂತದ ಮೋರಿಗಳ ಪಕ್ಕದಲ್ಲಿ ಇರುವ ನಿವೇಶನಗಳಿಗೆ ಸಾಲವನ್ನು ನೀಡಲಾಗಿತ್ತು. ಬಿಡಿಎ, ಗೃಹಮಂಡಳಿ ಮತ್ತು ಖಾಸಗಿ ಲೇಔಟ್‌ಗಳು ಸಹ ರಾಜಕಾಲುವೆ ಪಕ್ಕದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದವು. ಇವೆಲ್ಲವೂ ಕಾನೂನು ಬದ್ಧವಾಗಿಯೇ ಕಂಡುಬಂದ ಕಾರಣದಿಂದ ಬ್ಯಾಂಕಿನವರು ಸಾಲವನ್ನು ನೀಡಿದ್ದರು. 2017ರಲ್ಲಿ ಹಸಿರು ಪೀಠದ ಆದೇಶ ಬಂದ ಮೇಲೆ ವಿವಿಧ ಹಂತದ ರಾಜಕಾಲುವೆಗಳ ಅಥವಾ ಮೋರಿ ಇವುಗಳ ಪಕ್ಕದಲ್ಲಿ ನೀಡಿರುವ ನಿವೇಶನಗಳು ಬೆಲೆಯನ್ನು ಕಳೆದುಕೊಂಡಿರುತ್ತವೆ.

ಮೊದಲನೇ ಹಂತದ ರಾಜಕಾಲುವೆಗೆ ಎರಡನೇ ಹಂತದ ಮತ್ತು ಮೂರನೇ ಹಂತದ ರಾಜಕಾಲುವೆಗೆ ಕ್ರಮವಾಗಿ 75 ಮೀಟರ್, 30 ಮೀಟರ್ ಮತ್ತು 25 ಮೀಟರ್ ಬಿಟ್ಟು ಮನೆಗಳನ್ನು ನಿರ್ವಹಿಸಬೇಕು. ಈ ವಿಸ್ತೀರ್ಣದ ವ್ಯಾಪ್ತಿಯಲ್ಲಿರುವ ನಿವೇಶನಗಳಿಗೆ ಸಾಲವನ್ನು ನೀಡುವುದಿಲ್ಲ, ಕಟ್ಟಡ ಕಟ್ಟಲು ನಕ್ಷೆಯನ್ನು ನೀಡುವುದಿಲ್ಲ, ಇದರಿಂದಾಗಿ ಇವುಗಳು ಬೆಲೆಯನ್ನು ಕಳೆದುಕೊಂಡಿರುತ್ತವೆ. 2016ರ ಮುನ್ನ ಅಂದಿನ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಸಾಲವನ್ನು ನೀಡಿರುತ್ತಾರೆ. ಈ ಆದೇಶದ ಅನ್ವಯ ಇಂತಹ ನಿವೇಶನಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿರುತ್ತವೆ. ಒಂದು ವೇಳೆ ಬ್ಯಾಂಕಿನವರು ಹರಾಜು ಹಾಕಿದರೂ 10ನೇ 1 ಭಾಗವೂ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸಚಿವರು ಮತ್ತು ಅಡ್ವಕೇಟ್ ಜನರಲ್‌ರವರು ಚರ್ಚಿಸಿ ಹಸಿರು ಪೀಠಕ್ಕೆ ಮನವಿಯನ್ನು ಸಲ್ಲಿಸಿ 2016ರ ಹಿಂದೆ ಹಂಚಿಕೆಯಾಗಿದ್ದ, ಈ ನಿವೇಶನಗಳಿಗೆ ಆದೇಶ ಅನ್ವಯವಾದರೆ ಇದರಿಂದ ಲಕ್ಷಾಂತರ ನಿವೇಶನದ ಮಾಲಕರು ತೊಂದರೆಗೆ ಸಿಲುಕುತ್ತಾರೆ, ಜೊತೆಗೆ ಇವುಗಳ ಮೇಲೆ ಸಾಲವನ್ನು ನೀಡಿರುವ ಬ್ಯಾಂಕಿಗೂ ತೊಂದರೆಯಾಗುತ್ತದೆ ಎಂಬ ವಿಚಾರವನ್ನು ತಿಳಿಸಬೇಕು. ಈ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್‌ಗಳು ಇಂತಹ ನಿವೇಶನಗಳ ಪಟ್ಟಿಯನ್ನು ಮಾಡಿಕೊಂಡು ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ.

ಸಹಕಾರಿ ಇಲಾಖೆಯಲ್ಲಿ ಇರುವಂತಹ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ ಲೆಕ್ಕಪರಿಶೋಧಕರು ಬ್ಯಾಂಕುಗಳು ನೀಡುವ ವಾರ್ಷಿಕ ಲೆಕ್ಕಪತ್ರವನ್ನು ಹಣ ಪಡೆದು ಒಪ್ಪಿಗೆ ನೀಡುವುದರಿಂದ ಇಂತಹ ಅವ್ಯವಹಾರಗಳು ನಡೆಯುತ್ತಿವೆ. ಆದುದರಿಂದ ಸರಿಯಾದ ರೀತಿಯಲ್ಲಿ ಬ್ಯಾಂಕ್‌ಗಳ ವಾರ್ಷಿಕ ಲೆಕ್ಕಪತ್ರ ವರದಿಯನ್ನು ತುಲನೆ ಮಾಡಿ ಅನುಮೋದನೆ ನೀಡುವಂತಹ ವ್ಯವಸ್ಥೆ ಸಹಕಾರಿ ಇಲಾಖೆಯಲ್ಲಿ ಆಗಬೇಕು.

ಬಹಳಷ್ಟು ಸಹಕಾರಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯಲ್ಲಿ ಒಂದೇ ಕುಟುಂಬದವರು ಇಲ್ಲವೇ ಒಂದೇ ಪಂಗಡದವರು ಇರುವುದರಿಂದ ತಪ್ಪುಗಳು ಸುಲಭವಾಗಿ ಹೊರಬರುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಅಕ್ರಮಗಳು ಆದಾಗ ಮಾತ್ರ ಬಯಲಾಗುತ್ತದೆ. ಆದುದರಿಂದ ಯಾವುದೇ ಸಹಕಾರಿ ಸಂಸ್ಥೆಯಲ್ಲಿಯೂ ಸಹ ಒಂದು ಪಂಗಡ, ಒಂದು ಜಾತಿ, ಒಂದು ಧರ್ಮಕ್ಕೆ ಸೇರಿದ ಶೇ. 50ಕ್ಕಿಂತ ಹೆಚ್ಚು ನಿರ್ದೇಶಕರನ್ನು ಹೊಂದಿರಬಾರದು ಎಂಬ ತಿದ್ದುಪಡಿಯನ್ನು ತುರ್ತಾಗಿ ತರಬೇಕಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳು ನಷ್ಟವನ್ನು ಅನುಭವಿಸಿದಾಗ ಅವುಗಳಿಗೆ ಸಾಲವನ್ನು ನೀಡಿ ಉತ್ತೇಜಿಸಲಾಗುತ್ತಿದೆ. ಅದೇ ರೀತಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ಸಹಕಾರಿ ಬ್ಯಾಂಕ್‌ಗಳಿಗೆ ಬಡ್ಡಿ ರಹಿತವಾಗಿ ಸಾಲವನ್ನು ನೀಡಿ ಕೆಲವು ವರ್ಷಗಳ ಸಮಯವನ್ನು ನೀಡಿ ಅದನ್ನು ವಾಪಸ್ ಪಡೆಯುವ ಯೋಜನೆಯನ್ನು ರೂಪಿಸಿದರೆ ಬ್ಯಾಂಕ್‌ಗಳು ಉಳಿಯುತ್ತವೆ.

ಆರ್ಥಿಕ ಸಮಸ್ಯೆಗಳು ಉಲ್ಬಣಗೊಂಡಿರುವ ಕಾರಣದಿಂದ ಉದ್ಯಮಗಳು ಹಾಳಾಗಿರುವುದರಿಂದ ಸಾಲಗಾರರಿಗೆ ಒಂದಾವರ್ತಿ ಸಾಲ ಮರುಪಾವತಿಗೆ ಅವಕಾಶವನ್ನು ಮಾಡಿಕೊಟ್ಟು ಬಡ್ಡಿ ಮತ್ತು ಚಕ್ರಬಡ್ಡಿಯಲ್ಲಿ ಕೆಲವು ರಿಯಾಯಿತಿಗಳನ್ನು ನೀಡಬೇಕು. ಇದರಿಂದ ಬ್ಯಾಂಕ್‌ಗಳಿಗೆ ಸಾಲ ವಸೂಲಾತಿ ತ್ವರಿತಗತಿಯಲ್ಲಿ ಆಗುತ್ತದೆ. ಹಲವಾರು ಬ್ಯಾಂಕ್‌ಗಳಲ್ಲಿ ಸ್ಥಿರಾಸ್ತಿಗಳನ್ನು ಇಟ್ಟು ಸಾಲ ಪಡೆದು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡದ ಕಾರಣದಿಂದ ಅವರ ಮೇಲೆ ಮೊಕದ್ದಮೆಗಳನ್ನು ಹೂಡಿ ನ್ಯಾಯಾಲಯದಿಂದ ಆಸ್ತಿಯ ಮಾರಾಟಕ್ಕೆ ಆದೇಶವನ್ನು ತಂದಿರುತ್ತಾರೆ. ಹರಾಜಿನಲ್ಲಿ ಹಲವಾರು ಕೋಟಿ ರೂಪಾಯಿಗಳನ್ನು ಕೊಟ್ಟು ಆಸ್ತಿಯನ್ನು ಖರೀದಿಸುತ್ತಾರೆ. ಈ ನಡುವೆ ಇಂತಹ ಪ್ರಕರಣಕ್ಕೂ ಸಹ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದು ಆಸ್ತಿ ಖರೀದಿಸಿದವರಿಗೆ ಅದನ್ನು ಸ್ವಾದೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹರಾಜಿನ ನಂತರ ಸರಿಯಾದ ಕಾರಣಗಳಿಲ್ಲದಿದ್ದರೂ ತಡೆಯಾಜ್ಞೆಗಳನ್ನು ನೀಡುವ ವಿಚಾರದಲ್ಲಿ ನ್ಯಾಯಾಲಯ ಮತ್ತಷ್ಟು ಸ್ಪಷ್ಟತೆಯ ಆದೇಶಗಳನ್ನು ನೀಡಬೇಕಾಗಿದೆ. ಬ್ಯಾಂಕ್‌ಗಳ ಆರ್ಥಿಕ ಸಮಸ್ಯೆಗಳಿಗೆ ಇದೂ ಒಂದು ಕಾರಣವಾಗಿದೆ.

Writer - ಕೆ. ಎಸ್. ನಾಗರಾಜ್

contributor

Editor - ಕೆ. ಎಸ್. ನಾಗರಾಜ್

contributor

Similar News