ಕೋವಿಡ್-19 ಎರಡನೇ ಅಲೆಯನ್ನು ಉತ್ತರಪ್ರದೇಶ ಸರಿಸಾಟಿಯಿಲ್ಲದೆ ನಿರ್ವಹಿಸುತ್ತಿದೆ : ಪ್ರಧಾನಿ ಮೋದಿ

Update: 2021-07-15 06:57 GMT

ಹೊಸದಿಲ್ಲಿ: ಉತ್ತರಪ್ರದೇಶ ಸರಕಾರವು ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಿರುವ ರೀತಿ ಅಭೂತಪೂರ್ವವಾಗಿತ್ತು ಎಂದು ಗುರುವಾರ ಬೆಳಿಗ್ಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಉತ್ತರಪ್ರದೇಶದಲ್ಲಿ ಕೊರೋನದ ಎರಡನೇ ಅಲೆಯ  ಉತ್ತುಂಗದಲ್ಲಿದ್ದಾಗ ಪ್ರತಿದಿನ 30,000 ಹೊಸ ಪ್ರಕರಣಗಳು ದಾಖಲಾಗಿದ್ದವು.  ರಾಜ್ಯವು ವೈರಸ್  ವಿರುದ್ಧ ಸಮರ್ಥವಾಗಿ ಹೋರಾಡಿದೆ. ಸಾಂಕ್ರಾಮಿಕ ರೋಗದ ನಿರ್ವಹಣೆ ಪ್ರಶಂಸೆಗೆ ಅರ್ಹವಾಗಿದೆ.  ಉತ್ತರ  ಪ್ರದೇಶ ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ . ಆದರೆ ಸಾಂಕ್ರಾಮಿಕ ರೋಗವನ್ನು ಉತ್ತರ ಪ್ರದೇಶವು ನಿಭಾಯಿಸಿದ ಹಾಗೂ  ನಿಯಂತ್ರಿಸಿದ ರೀತಿ ಶ್ಲಾಘನೆಗೆ ಅರ್ಹವಾಗಿದೆ. ಕೋವಿಡ್-19 ರ ಎರಡನೇ ಅಲೆಯನ್ನು  ಉತ್ತರಪ್ರದೇಶ ನಿರ್ವಹಿಸಿರುವ ರೀತಿಗೆ ಸಾಟಿಯಿಲ್ಲ" ಪ್ರಧಾನಿ ಹೇಳಿದರು.

ಕೋವಿಡ್ ಬೆದರಿಕೆಯ ಹೊರತಾಗಿಯೂ ಕನ್ವರ್ ಯಾತ್ರೆಯನ್ನು ಮುಂದಿನ ವಾರದಿಂದ ಅನುಮತಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಕಳುಹಿಸಿದ ಒಂದು ದಿನದ ನಂತರ ಪ್ರಧಾನಮಂತ್ರಿಯವರಿಂದ ಈ ಪ್ರಶಂಸೆ ವ್ಯಕ್ತವಾಗಿದೆ. ಉತ್ತರಪ್ರದೇಶ ರಾಜ್ಯದ ನಿರ್ಧಾರದಿಂದ ಭಾರತೀಯ ನಾಗರಿಕರು "ಗೊಂದಲ ಕ್ಕೊಳಗಾಗಿದ್ದಾರೆ" ಎಂದು ಸರ್ವೋಚ್ಚ ನ್ಯಾಯಾಲಯ  ಹೇಳಿತ್ತು. 

ಉತ್ತರ ಪ್ರದೇಶ ಸರಕಾರವು ಕೊರೋನ  ಸಾಂಕ್ರಾಮಿಕ ರೋಗವನ್ನು ನಿಭಾಯಿಸಿರುವ ಬಗ್ಗೆ ವ್ಯಾಪಕ ಟೀಕೆಗಳನ್ನು ಎದುರಿಸಿತ್ತು. ಮೇ ಹಾಗೂ  ಜೂನ್ ತಿಂಗಳಲ್ಲಿ ಗಂಗಾ ನದಿಯಲ್ಲಿ ಶಂಕಿತ ಕೋವಿಡ್ ರೋಗಿಗಳ ಶವಗಳು ತೇಲುತ್ತಿರುವುದು ಕಂಡುಬಂದಿತ್ತು.  ಗಂಗಾ ನದಿಯ ದಡದಲ್ಲಿರುವ ಆಳವಿಲ್ಲದ ಸಮಾಧಿಗಳಲ್ಲಿ ಇಂತಹ ಹೆಚ್ಚಿನ ಶವಗಳನ್ನು ಪತ್ತೆ ಹಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News