ಲಸಿಕೆಯ ಕೊರತೆ: ದಕ್ಷಿಣ ದಿಲ್ಲಿಯಲ್ಲಿ 21 ಕೋವಿಡ್ ಲಸಿಕೆ ಕೇಂದ್ರಗಳು ಸ್ಥಗಿತ

Update: 2021-07-15 15:32 GMT

ಹೊಸದಿಲ್ಲಿ, ಜು.15: ದೇಶದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕೆ ಅಭಿಯಾನದ ನಡುವೆಯೇ ಗುರುವಾರ ದಕ್ಷಿಣ ದಿಲ್ಲಿಯಲ್ಲಿನ 21 ಲಸಿಕೆ ಕೇಂದ್ರಗಳು ಲಸಿಕೆಯ ಕೊರತೆಯಿಂದಾಗಿ ಬಾಗಿಲೆಳೆದುಕೊಂಡಿವೆ.

ಲಸಿಕೆ ಸೀಮಿತ ಪ್ರಮಾಣದಲ್ಲಿ ದಾಸ್ತಾನಿದೆ ಮತ್ತು ಪೂರೈಕೆಯು ಅನಿಯಮಿತವಾಗಿದೆ,ಹೀಗಾಗಿ ಮೊದಲ ಡೋಸ್‌ಗಾಗಿ ದಾಸ್ತಾನಿನ ಕೇವಲ ಶೇ.20ರಷ್ಟನ್ನು ಬಳಸಬಹುದಾಗಿದೆ ಎಂದು ದಿಲ್ಲಿ ಸರಕಾರದ ಇತ್ತೀಚಿನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪೈಕಿ ಹೆಚ್ಚಿನ ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿತ್ತು.

ಜು.14ರ ಬೆಳಿಗ್ಗೆ ಇದ್ದಂತೆ ದಿಲ್ಲಿ ಸರಕಾರದ ಬಳಿ 2,46,340 ಡೋಸ್ ಕೋವಿಶೀಲ್ಡ್ ಮತ್ತು 63,840 ಡೋಸ್ ಕೋವ್ಯಾಕ್ಸಿನ್ ಲಸಿಕೆಗಳ ದಾಸ್ತಾನು ಇತ್ತು. ನಗರದ 763 ಪ್ರದೇಶಗಳಲ್ಲಿ 1,374 ಲಸಿಕೆ ಕೇಂದ್ರಗಳಿದ್ದು,ಇವು ಪ್ರತಿನಿತ್ಯ ಒಟ್ಟು 2,26,552 ಡೋಸ್ ಲಸಿಕೆಯನ್ನು ವಿತರಿಸುತ್ತಿವೆ. ಜು.12ರಿಂದಲೇ ದಿಲ್ಲಿಯಲ್ಲಿ ಲಸಿಕೆ ಪೂರೈಕೆ ಸ್ಥಿತಿಯು ಹದಗೆಡತೊಡಗಿದ್ದು,ಮುಂದಿನ ಮಾಹಿತಿ ನೀಡುವವರೆಗೆ ಲಸಿಕೆಗಾಗಿ ಬರದಂತೆ ವಿವಿಧ ಕೇಂದ್ರಗಳು ಸಾರ್ವಜನಿಕರಿಗೆ ಸೂಚಿಸಿದ್ದವು.

ಅತ್ತ ಮಧ್ಯಪ್ರದೇಶ,ಮಹಾರಾಷ್ಟ್ರ ಮತ್ತು ಒಡಿಶಾದಂತಹ ರಾಜ್ಯಗಳೂ ಲಸಿಕೆ ಕೊರತೆಯನ್ನು ಅನುಭವಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News