ದಡಾರ, ಮತ್ತಿತರ ಕಾಯಿಲೆ ಚುಚ್ಚುಮದ್ದು ನೀಡುವಲ್ಲಿ ವಿಳಂಬ

Update: 2021-07-15 16:32 GMT

ಜಿನೆವಾ, ಜು.15: ಕೊರೋನ ಸೋಂಕಿನ ಸಮಸ್ಯೆಯು ಮಕ್ಕಳ ನಿಗದಿತ ಲಸಿಕೀಕರಣ ಪ್ರಕ್ರಿಯೆಗೆ ತಡೆಯುಂಟು ಮಾಡಿರುವುದರಿಂದ ಮಿಲಿಯಾಂತರ ಮಕ್ಕಳು ಸೋಂಕಿನ ಅಪಾಯಕ್ಕೆ ಸಿಲುಕಿದ್ದು ಬೃಹತ್ ತೂಫಾನ್ ಇನ್ನೇನು ಅಪ್ಪಳಿಸುವ ಕ್ಷಣ ಎದುರಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಬಾಲ್ಯಕಾಲದಲ್ಲಿ ನೀಡುವ ಪ್ರಾಥಮಿಕ ಲಸಿಕೀಕರಣ ಕಳೆದ ವರ್ಷ ಕೊರೋನ ಸೋಂಕಿನಿಂದ ಬಹುತೇಕ ಸ್ಥಗಿತಗೊಂಡಿದ್ದರಿಂದ 23 ಮಿಲಿಯನ್ ಮಕ್ಕಳಿಗೆ ಲಸಿಕೆ ನೀಡಲಾಗಿಲ್ಲ. 2019ಕ್ಕೆ ಹೋಲಿಸಿದರೆ ಇದು 3.7 ಮಿಲಿಯನ್ ಹೆಚ್ಚಳವಾಗಿದೆ . ಈ ಕಾರ್ಯ ಮಾಡಬೇಕಿದ್ದ ಆರೋಗ್ಯ ಕಾರ್ಯಕರ್ತರಿಗೆ ಕೊರೋನ ಸೋಂಕು ನಿಯಂತ್ರಣ ಕಾರ್ಯ ವಹಿಸಲಾಗಿತ್ತು. ಜತೆಗೆ, ಕೊರೋನ ಸೋಂಕಿನ ಭೀತಿಯಿಂದ ಹಲವು ಪೋಷಕರು ಆರೋಗ್ಯಕೇಂದ್ರಕ್ಕೆ ಮಕ್ಕಳನ್ನು ಕರೆದೊಯ್ಯಲು ಹಿಂಜರಿದಿದ್ದರು ಎಂದು ಗುರುವಾರ ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಮಕ್ಕಳ ವಿಭಾಗ ಯುನಿಸೆಫ್‌ನ ವರದಿ ತಿಳಿಸಿದೆ.

ಇದರಿಂದ ಕೊರೋನ ವೈರಸ್ ಸೋಂಕು ಪ್ರಸಾರವಾಗುವ ಅಪಾಯವಷ್ಟೇ ಅಲ್ಲ, ಇತರ ಸಾಂಕ್ರಾಮಿಕ ರೋಗದ ಭೀತಿಯೂ ಹೆಚ್ಚಿದೆ. ಹಲವು ದೇಶಗಳಲ್ಲಿ ಕೊರೋನ ಸೋಂಕಿನ ಹಿನ್ನೆಲೆಯ ನಿರ್ಬಂಧ ಇನ್ನೂ ಜಾರಿಯಲ್ಲಿರುವುದರಿಂದ ಲಸಿಕೆ ಪಡೆಯದ ಮಕ್ಕಳು ಶಿಶುಗಳನ್ನು ಕಾಡುವ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಬೃಹತ್ ತೂಫಾನ್ ಇನ್ನೇನು ಅಪ್ಪಳಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆ ಮತ್ತು ರೋಗನಿರೋಧಕ ವಿಭಾಗದ ಮುಖ್ಯಸ್ಥೆ ಕೇಟ್ ಒ’ಬ್ರಿಯಾನ್ ಹೇಳಿದ್ದಾರೆ.

ಲಸಿಕೆ ಪಡೆಯದ ಕಾರಣ ಪ್ರತಿರೋಧಕ ಶಕ್ತಿ ಹೊಂದಿಲ್ಲದ ಮಕ್ಕಳ ಪ್ರಮಾಣ ಹೆಚ್ಚಿದೆ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಉಪಕ್ರಮಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಬೇಗನೆ ಸಡಿಲಗೊಳಿಸಿರುವುದರಿಂದ ಸಾಂಕ್ರಾಮಿಕ ಹರಡುವ ಸಾಧ್ಯತೆಯೂ ಹೆಚ್ಚಿದೆ . ಈ ಮಕ್ಕಳನ್ನು ರಕ್ಷಿಸಲು ಈಗಿಂದೀಗಲೇ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ.

ಕೊರೋನ ಸೋಂಕು ಹಾಗೂ ಇದಕ್ಕೆ ಸಂಬಂಧಿಸಿದ ನಿರ್ಬಂಧಗಳು ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಿದೆ. ಇದರ ಪರಿಣಾಮ ಅತ್ಯಂತ ದುರ್ಬಲರಾದ ಮಕ್ಕಳ ಜೀವದ ಮೇಲಾಗುತ್ತಿದೆ. ಕೊರೋನ ಸೋಂಕಿಗಿಂತಲೂ ಮೊದಲೇ , ಮಕ್ಕಳ ಲಸಿಕೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ನಮಗೆ ಆತಂಕವಿತ್ತು ಎಂದು ಯುನಿಸೆಫ್‌ನ ಮುಖ್ಯಸ್ಥೆ ಹೆನ್ರಿಟಾ ಫೋರೆ ಹೇಳಿದ್ದಾರೆ.

 ಮಕ್ಕಳಿಗೆ ಡಿಟಿಪಿ ಲಸಿಕೆಯ ಮೂರೂ ಡೋಸ್ ನೀಡಿಕೆ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ 86%ಕ್ಕೆ ಏರಿತ್ತು. ಆದರೆ 2020ರಲ್ಲಿ 83%ಕ್ಕೆ ಕುಸಿದಿದ್ದು, 22.7 ಮಿಲಿಯನ್ ಮಕ್ಕಳು ಲಸಿಕೀಕರಣದಿಂದ ಹೊರಗುಳಿದಿದ್ದಾರೆ. ಮಕ್ಕಳನ್ನು ಕಾಡುವ ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕವಾದ ದಡಾರದ ಪ್ರಥಮ ಡೋಸ್ ಲಸಿಕೀಕರಣ ಕಳೆದ ವರ್ಷ 86%ದಿಂದ 84%ಕ್ಕೆ ಕುಸಿದಿದೆ, ಕೇವಲ 71% ಮಕ್ಕಳು ಮಾತ್ರ 2ನೇ ಡೋಸ್ ಪಡೆದಿದ್ದಾರೆ. ದಕ್ಷಿಣ ಏಶ್ಯಾದಲ್ಲಿ ಲಸಿಕೀಕರಣ ಪ್ರಕ್ರಿಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಭಾರತದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಡಿಟಿಪಿ ಪ್ರಥಮ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ 3 ಮಿಲಿಯನ್‌ಗೆ ಹೆಚ್ಚಿದೆ( 2019ರಲ್ಲಿ 1.4 ಮಿಲಿಯನ್). ಮೂರೂ ಲಸಿಕೆ ಪಡೆದ ಮಕ್ಕಳ ಪ್ರಮಾಣ 91%ದಿಂದ 85%ಕ್ಕೆ ಇಳಿದಿದೆ. ಪಾಕಿಸ್ತಾನ, ಇಂಡೋನೇಶಿಯಾ ಮತ್ತು ಫಿಲಿಪ್ಪೀನ್ಸ್‌ನಲ್ಲೂ ಈ ಪ್ರಮಾಣ ಕಡಿಮೆಯಾಗಿದೆ.

ಅಮೆರಿಕದಲ್ಲೂ ಕಡಿಮೆ ನಿಧಿ ಒದಗಿಸಿರುವುದು, ಲಸಿಕೆಯ ಬಗ್ಗೆ ತಪ್ಪು ಮಾಹಿತಿ ಮುಂತಾದ ಕಾರಣಗಳಿಂದ ಡಿಟಿಪಿ ಡೋಸ್ ಪಡೆದ ಮಕ್ಕಳ ಸಂಖ್ಯೆ 2016ರಲ್ಲಿ 91% ಇದ್ದುದು ಕಳೆದ ವರ್ಷ 82%ಕ್ಕೆ ಇಳಿದಿದೆ . ಮೆಕ್ಸಿಕೋದಲ್ಲಿ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ ಅತ್ಯಧಿಕ ವೇಗದಲ್ಲಿ ಹೆಚ್ಚುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಕೊರೋನ ಸೋಂಕಿನ ಜತೆಗೆ, ಮಕ್ಕಳು ಇನ್ನೂ ಹಲವು ರೋಗಗಳಿಗೆ ಬಲಿಪಶುಗಳಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News