ಕೋವಿಡ್ ಲಸಿಕೆ ಬಗ್ಗೆ ಅಪನಂಬಿಕೆ ಬೇಡ: ಝಮೀರ್ ಅಹ್ಮದ್ ಖಾನ್

Update: 2021-07-15 16:35 GMT

ಬೆಂಗಳೂರು, ಜು.15: ಕೋವಿಡ್ ಲಸಿಕೆಯಿಂದ ಯಾವುದೆ ಅಡ್ಡಪರಿಣಾಮಗಳು ಇಲ್ಲ. ಜನ ಸಾಮಾನ್ಯರು ವದಂತಿಗಳು, ಅಪನಂಬಿಕೆಗಳನ್ನು ದೂರವಿಟ್ಟು ಜವಾಬ್ದಾರಿಯುತ ನಾಗರಿಕರಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.

ಗುರುವಾರ ನಗರದ ರಾಯಪುರಂ ವಾರ್ಡ್‍ನ ಸಂಗಂ ಸರ್ಕಲ್‍ನಲ್ಲಿರುವ ಸರಕಾರಿ ಪದವಿ ಕಾಲೇಜು ಕಟ್ಟಡದಲ್ಲಿ ಎಸಿಟಿ(ಆಕ್ಷನ್ ಕೋವಿಡ್-19 ಟೀಮ್) ಸಹಯೋಗದೊಂದಿಗೆ ಆಟೋ ಚಾಲಕರಿಗಾಗಿ ಆಯೋಜಿಸಲಾಗಿದ್ದ ಕೋವಿಡ್ ಲಸಿಕಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಜ್, ಉಮ್ರಾ ಯಾತ್ರೆಗಳಿಗೆ ತೆರಳಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಮೊದಲ ಪ್ರಕರಣ ಕಾಣಿಸಿಕೊಂಡಿದ್ದ ಚೀನಾದಲ್ಲಿ ಇವತ್ತು ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗಿದೆ. ಇದರಿಂದಾಗಿ, ಅಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿಲ್ಲ. ಅಲ್ಲದೆ, ಮೂರನೆ ಅಲೆಯನ್ನು ಎದುರಿಸಲು 3 ರಿಂದ 17 ವರ್ಷದವರಿಗೆ ಕಳೆದ 25 ದಿನಗಳಿಂದ ಲಸಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ಈ ವೈರಸ್‍ನಿಂದ ನಾವು ಸುರಕ್ಷಿತವಾಗಿರಬಹುದು. ಆದುದರಿಂದ, ಜನಸಾಮಾನ್ಯರು ಯಾವುದೆ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ನೀವು ಲಸಿಕೆ ಹಾಕಿಸಿಕೊಂಡರೆ ನಿಮ್ಮ ಮನೆಯವರು ಸುರಕ್ಷಿತವಾಗಿರುತ್ತಾರೆ ಅನ್ನೋದನ್ನು ತಿಳಿದುಕೊಳ್ಳಿ. ಲಸಿಕೆಯಲ್ಲಿ ಅಡ್ಡಪರಿಣಾಮಗಳಿದ್ದರೆ ಜನಪ್ರತಿನಿಧಿಗಳಾಗಿ ನಾವು ಯಾಕೆ ತೆಗೆದುಕೊಳ್ಳುತ್ತಿದ್ದೇವು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಹಲವಾರು ಜನರು ಲಸಿಕೆ ಬಗ್ಗೆ ತಪ್ಪು ಮಾಹಿತಿಯನ್ನು ಹೊಂದಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ನೀಡಬೇಕಿದೆ. ಆಟೋ ಚಾಲಕರು ಬದುಕು ನಡೆಸುವುದೇ ಕಷ್ಟ. ನಿಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದೀರಾ. ಲಸಿಕೆ ಹಾಕಿಸಿಕೊಂಡರೆ ನೀವು ಸುರಕ್ಷಿತವಾಗಿರುತ್ತೀರಾ. ಆದುದರಿಂದ, ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವು ಲಸಿಕೆ ಹಾಕಿಸಿಕೊಳ್ಳಿ, ನಿಮ್ಮ ಕುಟುಂಬದವರು, ಸಂಬಂಧಿಕರಿಗೂ ಲಸಿಕೆ ಬಗ್ಗೆ ತಿಳಿಸಿ ಎಂದು ಅವರು ಹೇಳಿದರು.

ಈ ಸರಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ. ಆದುದರಿಂದ, ಸಮರ್ಪಕವಾಗಿ ಲಸಿಕೆ ಪೂರೈಸುತ್ತಿಲ್ಲ. ನಮ್ಮ ಕ್ಷೇತ್ರದ ಜನರಿಗಾಗಿ ವಿವಿಧ ಎನ್‍ಜಿಒಗಳು, ದಾನಿಗಳು, ನಾರಾಯಣ ಹೃದ್ರಾಲಯ, ಅಪೋಲೋ ಆಸ್ಪತ್ರೆ, ರೋಟರಿ ಕ್ಲಬ್ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಲಸಿಕೆಯನ್ನು ನೀಡುವ ಕೆಲಸ ಮಾಡುತ್ತಿದ್ದೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಟ್ಯಾಕ್ಸಿ, ಆಟೋ ಚಾಲಕರು ಕೋವಿಡ್ ಲಸಿಕೆಯ ಎರಡು ಡೋಸ್ ಹಾಕಿಸಿಕೊಂಡು ಪ್ರಮಾಣಪತ್ರವನ್ನು ಪ್ರದರ್ಶಿಸಿದರೆ ಮಾತ್ರ ಅವರಿಗೆ ವಾಹನ ಚಲಾಯಿಸಲು ಅವಕಾಶ ನೀಡಲಾಗಿದೆ. ಅಂಗಡಿ ತೆರೆಯುವವರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು. ಅಂತಹ ಕಾನೂನು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಈ ರೀತಿಯ ಕಾನೂನು ಬರುವ ಸಾಧ್ಯತೆಗಳು ಹೆಚ್ಚಿವೆ ಎಂದು ಅವರು ಹೇಳಿದರು.
ಈಗ ಲಸಿಕೆ ಉಚಿತವಾಗಿ ಲಭ್ಯವಾಗುತ್ತಿದೆ. ದಯವಿಟ್ಟು ತೆಗೆದುಕೊಳ್ಳಿ. ಕಾನೂನು ಬಂದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಪಾವತಿಸಿ ಲಸಿಕೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದುದರಿಂದ, ಈಗ ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳಿ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲೀಕ್ ಬೇಗ್, ಶಕೀಲ್ ನವಾಝ್, ಸಿ.ಆರ್.ರವಿಪ್ರಸಾದ್, ರಿಝ್ವಾನ್ ಖಾನ್, ಅಫ್ಝಲ್ ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News