ದೇಶಪ್ರೇಮ-ದೇಶದ್ರೋಹ: ಬದಲಾಗುತ್ತಿರುವ ವ್ಯಾಖ್ಯಾನ!

Update: 2021-07-17 04:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ಸಂವಿಧಾನ ಅದೆಷ್ಟು ಉತ್ತಮವಾಗಿರಲಿ, ಕೆಟ್ಟ ಆಡಳಿತಗಾರನ ಕೈಯಲ್ಲಿ ಅದು ಕೆಟ್ಟದಾಗಿಯೇ ಜಾರಿಗೊಳ್ಳುತ್ತದೆ. ಸಂವಿಧಾನದಲ್ಲಿ ಎಷ್ಟೇ ಕೆಡುಕಿರಲಿ, ಒಬ್ಬ ಒಳ್ಳೆಯ ಆಡಳಿತಗಾರನ ಕೈಯಲ್ಲಿ ಅದರ ಒಳಿತುಗಳೇ ಜಾರಿಗೊಳ್ಳುತ್ತವೆ’’ ಈ ಮಾತನ್ನು ಹೇಳಿದವರು ಅಂಬೇಡ್ಕರ್. ಸ್ವತಂತ್ರ ಭಾರತದ ಸಂವಿಧಾನದಲ್ಲಿ ಅದೆಷ್ಟೇ ಒಳ್ಳೆಯ ಆಶಯಗಳಿದ್ದರೂ, ಒಬ್ಬ ಕೆಟ್ಟ ಆಡಳಿತಗಾರನ ಕೈಯಲ್ಲಿ ಅದು ದುರುಪಯೋಗಗೊಳ್ಳುವುದು ಅಸಾಧ್ಯವೇನೂ ಅಲ್ಲ ಎನ್ನುವ ಮುನ್ಸೂಚನೆಯನ್ನು ಅಂಬೇಡ್ಕರ್ ಈ ಮೂಲಕ ನೀಡಿದ್ದರು. ಕಳೆದ ಏಳು ವರ್ಷಗಳಲ್ಲಿ ಅವರ ಎಚ್ಚರಿಕೆ ಒಂದೊಂದಾಗಿ ನಿಜವಾಗುತ್ತಿದೆ. ವಿಪರ್ಯಾಸವೆಂದರೆ, ಬ್ರಿಟಿಷರ ಕಾಲದಲ್ಲಿ ಈ ದೇಶದ ಸ್ವಾತಂತ್ರ ಹೋರಾಟಗಾರರ ಮೇಲೆ ಅತ್ಯಂತ ಭೀಕರವಾಗಿ ಬಳಸಲ್ಪಟ್ಟಿದ್ದ ಐಪಿಸಿ124ಎ(ದೇಶದ್ರೋಹ) ಕಾನೂನು ಕಳೆದ ಏಳು ವರ್ಷಗಳಲ್ಲಿ ಬ್ರಿಟಿಷರ ಕಾಲಕ್ಕಿಂತಲೂ ಭೀಕರವಾಗಿ ಬಳಕೆಯಾಗುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಮೇಲೆಯೂ ಈ ಕಾನೂನನ್ನು ಪ್ರಯೋಗಿಸಿ ಅವರನ್ನು ಜೈಲಿಗೆ ತಳ್ಳಲಾಗಿದೆ. ಒಂದು ಕಾಲದಲ್ಲಿ ಬ್ರಿಟಿಷ್ ಸರಕಾರವನ್ನು ವಿರೋಧಿಸಿದವರ ಮೇಲೆ ಈ ಕಾನೂನನ್ನು ಬಳಕೆ ಮಾಡಲಾಗುತ್ತಿತ್ತು. ಬ್ರಿಟಿಷ್ ಸರಕಾರವನ್ನು ವಿರೋಧಿಸುವುದೆಂದರೆ ದೇಶವನ್ನು ವಿರೋಧಿಸುವುದು ಎನ್ನುವ ಹಿನ್ನೆಲೆಯಲ್ಲಿ ಆ ಕಾನೂನನ್ನು ಬ್ರಿಟಿಷರು ರಚಿಸಿದ್ದರು. ಬ್ರಿಟಿಷರು ಈ ದೇಶ ಬಿಟ್ಟು ಹೋದ ಬಳಿಕ, ನಮ್ಮ ದೇಶವನ್ನು ಆಳುತ್ತಿರುವುದು ಪ್ರಜೆಗಳ ಸರಕಾರ. ಈ ಸರಕಾರವೇನಾದರೂ ತಪ್ಪು ಮಾಡಿದರೆ, ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೊಳಿಸಿದರೆ ಅದನ್ನು ಪ್ರಶ್ನಿಸುವ ಎಲ್ಲ ಅಧಿಕಾರವನ್ನು ಪ್ರಜೆಗಳು ಹೊಂದಿದ್ದಾರೆ.

ಜನಪ್ರತಿನಿಧಿಗಳು ಪ್ರಜೆಗಳನ್ನು ಪ್ರತಿನಿಧಿಸುವವರೇ ಹೊರತು ಪ್ರಜೆಗಳ ನಾಯಕರಲ್ಲ, ಬದಲಿಗೆ ಸೇವಕರು. ಇಲ್ಲಿ ಪ್ರಜೆಗಳೇ ಪ್ರಭುಗಳು. ಆದುದರಿಂದ, ಜನರ ಟೀಕೆ, ಪ್ರಶ್ನೆಗಳಿಗೆ ಉತ್ತರಿಸಲು ಅವರು ಸರ್ವರೀತಿಯಲ್ಲಿ ಬಾಧ್ಯಸ್ಥರು. ಆದರೆ ಇತ್ತೀಚಿನ ದಿನಗಳಲ್ಲಿ ಇದು ತಿರುವು ಮುರುವಾಗಿದೆ. ಯಾರು ಸರಕಾರವನ್ನು ಪ್ರಶ್ನಿಸುತ್ತಾರೆಯೋ, ಸರಕಾರದ ನೀತಿಗಳ ವಿರುದ್ಧ ಧ್ವನಿಯೆತ್ತುತ್ತಾರೆಯೋ ಅವರನ್ನು ‘ದೇಶದ್ರೋಹಿ’ ಎಂದು ಕರೆದು ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಸರಕಾರದ ಹಲವು ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದ, ಸರಕಾರವನ್ನು ಟೀಕಿಸಿದ ಹೋರಾಟಗಾರರ ಮೇಲೆ ‘ದೇಶದ್ರೋಹ’ದ ಆರೋಪವನ್ನು ಮಾಡಲಾಗಿದೆ. ರಾಜಕಾರಣಿಗಳ ಧೋರಣೆಗಳನ್ನು ಪ್ರಶ್ನಿಸುವುದೇ ದೇಶದ್ರೋಹ ಎನ್ನುವಂತಹ ವಾತಾವರಣ ದೇಶದೊಳಗೆ ನಿರ್ಮಾಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ತನ್ನನ್ನು ಆರಿಸಿದ ಜನರ ಬಳಿಯೇ, ನಿಮ್ಮ ಪೌರತ್ವ ಸಾಬೀತು ಪಡಿಸಿ ಎನ್ನುವ ಹಂತಕ್ಕೆ ಸರಕರಾ ಇಳಿದಿದೆ.ು

ಇಂತಹ ಸಂದರ್ಭದಲ್ಲಿ ‘ದೇಶದ್ರೋಹ ಕಾನೂನಿ’ನ ಕುರಿತಂತೆ ಸುಪ್ರೀಂಕೋರ್ಟ್ ತನ್ನ ಮಹತ್ವದ ಅಭಿಪ್ರಾಯವನ್ನು ಹೇಳಿದೆ. ದೇಶದ್ರೋಹ ಕಾಯ್ದೆ ದುರುಪಯೋಗಗೊಳ್ಳುತ್ತಿರುವ ಕುರಿತಂತೆ ಅದು ಆತಂಕವನ್ನು ವ್ಯಕ್ತಪಡಿಸಿದೆ. ‘ಈ ಕಾನೂನಿನ ಭಾರೀ ದುರುಪಯೋಗವಾಗುತ್ತಿದೆ. ದೇಶದ್ರೋಹ ಕಾನೂನಿನ ಬಳಕೆ ಮರದ ತುಂಡೊಂದನ್ನು ಕತ್ತರಿಸಲು ಅತ್ಯುತ್ಸಾಹಿ ಬಡಗಿಯ ಕೈಯಲ್ಲಿ ಗರಗಸ ಕೊಟ್ಟಂತೆ. ಆತ ಇಡೀ ಅರಣ್ಯವನ್ನೇ ಕತ್ತರಿಸುತ್ತಾನೆ’ ಎಂದು ಸುಪ್ರೀಂಕೋರ್ಟ್ ರೂಪಕಾತ್ಮಕವಾಗಿ ಕಾನೂನಿನ ಅಪಾಯವನ್ನು ವಿವರಿಸಿದೆ. ದುರಂತವೆಂದರೆ, ಸದ್ಯದ ದಿನಗಳಲ್ಲಿ ಈ ಕಾನೂನು ಬಡಗಿಯ ಕೈಯಲ್ಲಿಲ್ಲ, ಬದಲಿಗೆ ಮರಗಳ್ಳರ ಕೈಯಲ್ಲಿದೆ. ಇಂದು ವಿವಿಧ ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆಯನ್ನು ಹೊಂದಿದವರು, ದೇಶದ ವಿರುದ್ಧ ಸ್ಫೋಟಗಳನ್ನು ನಡೆಸಿದ ಆರೋಪಗಳನ್ನು ಹೊತ್ತವರು ಸಂಸತ್‌ನಲ್ಲಿ ಕುಳಿತು ‘ದೇಶದ್ರೋಹ’ದ ಕಾನೂನನ್ನು ಬಳಸುತ್ತಿದ್ದಾರೆ. ಯಾವುದು ದೇಶಪ್ರೇಮ? ಯಾವುದು ದೇಶದ್ರೋಹ? ಎನ್ನುವುದು ಕಾಲಕಾಲಕ್ಕೆ ಆಳುವವರ ಸಿದ್ಧಾಂತ ಬದಲಾದಂತೆ ತನ್ನ ವ್ಯಾಖ್ಯಾನಗಳನ್ನು ಬದಲಿಸಿಕೊಳ್ಳುತ್ತದೆ. ದುರಂತವೆಂದರೆ, ಗಾಂಧಿಯನ್ನು ಕೊಂದ ಗೋಡ್ಸೆಯನ್ನು ‘ದೇಶಪ್ರೇಮಿ’ ಎಂದು ಕರೆದು ಸಾರ್ವಜನಿಕವಾಗಿ ಯಾವ ಕಾನೂನಿನ ಭಯವೂ ಇಲ್ಲದೆ ನಮ್ಮ ನಡುವೆ ಓಡಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆೆ. ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯೊಬ್ಬರು, ಉಗ್ರರ ವಿರುದ್ಧ ಹೋರಾಡುತ್ತಾ ಈ ದೇಶಕ್ಕಾಗಿ ಪ್ರಾಣ ತೆತ್ತ ಹಿರಿಯ ಪೊಲೀಸ್ ಅಧಿಕಾರಿಯ ದೇಶಭಕ್ತಿಯನ್ನು ಪ್ರಶ್ನಿಸುತ್ತಾಳೆ ಮತ್ತು ಅದಕ್ಕಾಗಿ ಅವಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ.

ಬಳಿಕ, ಆಕೆ ರಾಷ್ಟ್ರೀಯ ಪಕ್ಷವೊಂದರಿಂದ ಆಯ್ಕೆಯಾಗಿ ಸಂಸತ್ತನ್ನ್ನು ಪ್ರವೇಶಿಸುತ್ತಾಳೆ. ಇಂತಹ ನಾಯಕರೇ, ಮುಂದೆ ಈ ದೇಶದ ಜನಸಾಮಾನ್ಯರ ಹಕ್ಕುಗಳ ಪರವಾಗಿ ಹೋರಾಟ ನಡೆಸುವವರ ವಿರುದ್ಧ ‘ದೇಶದ್ರೋಹ’ ಪ್ರಕರಣವನ್ನು ದಾಖಲಿಸುತ್ತಾರೆ. ಅಂದರೆ ಈ ದೇಶದಲ್ಲಿ ದೇಶಭಕ್ತಿಯ ವ್ಯಾಖ್ಯಾನ ಬದಲಾಗುತ್ತಿದೆ. ಈ ಕಾಲಘಟ್ಟದಲ್ಲಿ ಸರಕಾರವೊಂದರ ಜನವಿರೋಧಿ ನೀತಿಯ ಬಗ್ಗೆ ಮಾತನಾಡುವವನು ಸಹಜವಾಗಿಯೇ ದೇಶದ್ರೋಹಿಯಾಗಬಲ್ಲ. ಆತನ ಮೇಲೆ ದೇಶದ್ರೋಹದ ಕಾನೂನನ್ನು ಪ್ರಯೋಗಿಸಿ ಸುಲಭದಲ್ಲಿ ಅವನ ಬಾಯಿ ಮುಚ್ಚಿಸಬಹುದು. ತಾನು ದೇಶದ್ರೋಹಿಯಲ್ಲ ಎನ್ನುವುದನ್ನು ಸಾಬೀತು ಮಾಡುವುದು, ಸಂತ್ರಸ್ತರ ಹೊಣೆಗಾರಿಕೆ. ಹೀಗೆ ಬಂಧಿಸಲ್ಪಟ್ಟ ನೂರಾರು ಜನರು ಜೈಲಲ್ಲಿ ಕೊಳೆಯುತ್ತಿದ್ದಾರೆ. ಹಲವರು ತಾವು ದೇಶದ್ರೋಹಿಯಲ್ಲ ಎನ್ನುವುದನ್ನು ಸಾಬೀತು ಮಾಡಿ ಜೈಲಿನಿಂದ ಹೊರಬಂದಿದ್ದಾರೆ. ಸ್ವಾತಂತ್ರ ಸಿಕ್ಕಿದ ಬಳಿಕವೂ ಪ್ರಜೆಗಳಿಂದ ಆರಿಸಲ್ಪಟ್ಟ ಸರಕಾರವೊಂದು ತನ್ನದೇ ದೇಶದ ಪ್ರಜೆಯನ್ನು ‘ದೇಶದ್ರೋಹಿ’ ಎಂದು ಕರೆಯುವುದು ನಮಗೆ ದೊರಕಿದ ಸ್ವಾತಂತ್ರಕ್ಕೆ ಮಾಡುವ ಅವಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ‘ನಕಲಿ ಗೋರಕ್ಷಕರು’ ‘ಹಫ್ತಾ ವಸೂಲಿಗಾರರು’ ‘ವಿವಿಧ ಕ್ರಿಮಿನಲ್ ಹಿನ್ನೆಲೆಯಿರುವ ಗೂಂಡಾಗಳು’ ತಮ್ಮನ್ನು ತಾವು ದೇಶಪ್ರೇಮಿಗಳೆಂದು ಸ್ವಯಂ ಘೋಷಿಸಬಲ್ಲರು. ಅಷ್ಟೇ ಅಲ್ಲ, ಯಾರು ದೇಶದ್ರೋಹಿಗಳು ಎನ್ನುವುದನ್ನೂ ಇವರೇ ಇಂದು ನಿರ್ಧರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ರಿಟಿಷರ ಕಾಲದ ದೇಶದ್ರೋಹದ ಕಾನೂನು, ಮತ್ತೆ ದೇಶದ್ರೋಹಿಗಳಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಗಳು ಕಾಣುತ್ತಿವೆ. ಆದುದರಿಂದ ನ್ಯಾಯಾಲಯದ ಕಳವಳ ಯೋಗ್ಯವಾಗಿದೆ.

ಮತ್ತು ಈ ಕಾನೂನನ್ನು ಕಿತ್ತು ಹಾಕುವ ಸಮಯ ಹತ್ತಿರವಾಗಿದೆ. ಇದೇ ಸಂದರ್ಭದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ದಮನಿಸುವುದಕ್ಕಾಗಿ ಜಾರಿಗೆ ತಂದಿರುವ ಯುಎಪಿಎ ಕಾಯ್ದೆಯ ದುರುಪಯೋಗದ ಕುರಿತಂತೆಯೂ ನ್ಯಾಯಾಲಯ ಇತ್ತೀಚೆಗೆ ತನ್ನ ಆತಂಕವನ್ನು ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದು. ಸರಕಾರದ ನೀತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿ ರುವವರಿಗೂ-ಉಗ್ರವಾದಿಗಳಿಗೂ ಇರುವ ವ್ಯತ್ಯಾಸವನ್ನು ಸರಕಾರ ತಿಳಿದುಕೊಳ್ಳಬೇಕು ಎಂದು ನ್ಯಾಯಾಲಯ ಎಚ್ಚರಿಸಿತ್ತು. ಇತ್ತೀಚೆಗೆ ಜೈಲಿನಲ್ಲೇ ನಿಧನರಾದ ಸಾಮಾಜಿಕ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಯುಎಪಿಎ ಸಂತ್ರಸ್ತರಲ್ಲಿ ಒಬ್ಬರು. ಭಯೋತ್ಪಾದಕರು, ಉಗ್ರವಾದಿಗಳ ಮೇಲೆ ಬಳಸಬೇಕಾದ ಕಾನೂನನ್ನು ಯಾವ ಮುಜುಗರವೂ ಇಲ್ಲದೆ ಸಾಮಾಜಿಕ ಹೋರಾಟಗಾರರ ಮೇಲೆ ಸರಕಾರ ಬಳಸುತ್ತಿದೆ.

ಇದು ಒಂದೆಡೆ ಪ್ರಜಾಸತ್ತಾತ್ಮಕ ಹೋರಾಟಗಾರರನ್ನು ಉಗ್ರವಾದಿಗಳು ಎಂದು ಬಿಂಬಿಸಲು ಯತ್ನಿಸುತ್ತಿದ್ದರೆ, ಮಗದೊಂದೆಡೆ  ಪ್ರಜಾಸತ್ತಾತ್ಮಕ ಹೋರಾಟಗಾರರಿಗೆ ಅಹಿಂಸಾತ್ಮಕ ಹೋರಾಟದ ಬಗ್ಗೆ ಭ್ರಮನಿರಸನ ಸೃಷ್ಟಿಸುತ್ತಿದೆ. ದೇಶಾದ್ಯಂತಹ ಈಗಾಗಲೇ ಬೇರು ಬಿಟ್ಟಿರುವ ಉಗ್ರವಾದಿಗಳು ಇಂತಹ ಭ್ರಮನಿರಸನಗಳನ್ನು ತಮಗೆ ಪೂರಕವಾಗಿ ಬಳಸಿಕೊಳ್ಳಬಹುದು. ಆದುದರಿಂದ, ದೇಶದ್ರೋಹದ ಕಾನೂನಿನಷ್ಟೇ ಭೀಕರವಾಗಿ ಜನಸಾಮಾನ್ಯರನ್ನು ಕಾಡುತ್ತಿರುವ, ಅಧಿಕಾರಿಗಳು ಬಯಸಿದರೆ ಯಾರನ್ನೂ ಭಯೋತ್ಪಾದಕರನ್ನಾಗಿಸಬಲ್ಲ ಯುಎಪಿಎ ಕಾನೂನನ್ನು ಕೂಡ ನಿವಾರಿಸುವ ಕುರಿತಂತೆ ನ್ಯಾಯಾಲಯ ಆಲೋಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News