ಮೂರನೇ ಅಲೆಯನ್ನು ನಿಭಾಯಿಸಲು ಸರಕಾರ ಸರ್ವ ಸನ್ನದ್ಧ: ಸಚಿವ ಆರ್.ಅಶೋಕ್

Update: 2021-07-18 15:11 GMT

ಬೆಂಗಳೂರು, ಜು. 18: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ಹೇಳಿದರು. 

ರವಿವಾರ ಇಲ್ಲಿನ ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, `ಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚಿಸುವುದು, ವೈದ್ಯರಿಗೆ ತರಬೇತಿ ನೀಡುವುದು ಮತ್ತು ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ವೈದ್ಯರನ್ನು ಗುರುತಿಸುವುದು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಳೆಗಾಲದಲ್ಲಿ ನೀರು ತುಂಬುವ ತಗ್ಗು ಪ್ರದೇಶಗಳನ್ನು ಗುರುತಿಸಿ ಅದಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ' ಎಂದರು.

`ಶೀಘ್ರದಲ್ಲೇ ಈ ಬಗ್ಗೆ ಸಭೆ ನಡೆಸಲಾಗುವುದು. ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟಾಗಬಾರದು ಎಂದು ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಜ್ಯ ಬಿಜೆಪಿ ಸರಕಾರವು ಜು.26ರಂದು ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ ಮತ್ತು ಎಲ್ಲ ಸಚಿವರು ತಮ್ಮ ಸಾಧನೆಗಳನ್ನು ಪಟ್ಟಿ ಮಾಡಲು ತಿಳಿಸಲಾಗಿದೆ' ಎಂದು ತಿಳಿಸಿದರು.

`ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ. ಬಿಜೆಪಿ ಸರಕಾರವು ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿರುವುದರಿಂದ ಶಾಸಕರ ಸಭೆಯನ್ನು ಕರೆಯಲಾಗಿದೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ' ಎಂದು ಸಚಿವ ಅಶೋಕ್ ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News