ಚಿಕ್ಕಮಗಳೂರು: ವಾರಾಂತ್ಯದಲ್ಲಿ ಹರಿದು ಬರುತ್ತಿದೆ ಪ್ರವಾಸಿಗರ ದಂಡು

Update: 2021-07-18 17:59 GMT

ಚಿಕ್ಕಮಗಳೂರು, ಜು.18: ಜಿಲ್ಲಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದರೂ ವಾರಾಂತ್ಯದ ದಿನಗಳಲ್ಲಿ ಕಾಫಿನಾಡಿಗೆ ಹರಿದು ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಹೊರ ಜಿಲ್ಲೆ, ಹೊರರಾಜ್ಯಗಳ ಪ್ರವಾಸಿಗರು ಶನಿವಾರ ಹಾಗೂ ರವಿವಾರ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು, ಚಾರ್ಮಾಡಿ ಘಾಟ್, ಮುಳ್ಳಯ್ಯನಗಿರಿಯಂತಹ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮುಗಿಬಿದ್ದಿದ್ದ ದೃಶ್ಯಗಳು ಕಂಡು ಬಂದವು.

ಶನಿವಾರ ಮತ್ತು ರವಿವಾರ ಜಿಲ್ಲೆಯ ಪ್ರವಾಸಿತಾಣಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿದ್ದು, ನಿರಂತರ ಮಳೆಯಿಂದ ಕಾಫಿನಾಡಿನ ಗಿರಿಶ್ರೇಣಿಗಳಲ್ಲಿರುವ ಜಲಪಾತಗಳು ಮೈದುಂಬಿ ಹರಿಯುತ್ತಿರುವುದರಿಂದ ಇವುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಹೀಗೆ ಬರುವ ಪ್ರವಾಸಿಗರು ಝರಿಜಲಪಾತಗಳಲ್ಲಿ ಮಿಂದು, ಕುಣಿದು ಕುಪ್ಪಳಿಸುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುತ್ತಿರುವುದರಿಂದ ಸ್ಥಳೀಯರು ಮತ್ತು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಆರೋಪಿಸುತ್ತಿದ್ದು, ಸೈಲ್ಪಿ ಹುಚ್ಚಿನಿಂದ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಪೋಟೋ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಇದು ಪ್ರವಾಸಿಗರ ಪ್ರಾಣಕ್ಕೆ ಕುತ್ತಾಗಲಿದೆ ಎಂದೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ತಾಲೂಕಿನ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿ, ಸೀತಾಳಯ್ಯನಗಿರಿಯ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬೈಕ್, ಕಾರುಗಳಲ್ಲಿ ಆಗಮಿಸುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಗಿರಿಶ್ರೇಣಿಯ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನಧಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆ ಬದಿಯ ಧರೆ ಕುಸಿತದಂತಹ ವಿಕೋಪಗಳಿಂದಾಗಿ ರಸ್ತೆಗಳು ಶಿಥಿಲಗೊಳ್ಳುತ್ತಿದ್ದು, ಭಾರೀ ವಾಹನಗಳ ಸಂಚಾರದಿಂದ ಅಪಾಯ ಸಂಭವಿಸುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದು, ಗಿರಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಉದ್ದಕ್ಕೂ ನಿರಂತರ ಮಳೆಯಾಗುತ್ತಿದ್ದು, ರಸ್ತೆ ಬದಿಗಳಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಮೋಡ ಮುಸುಕಿದ ವಾತಾವರಣ, ಹಚ್ಚ ಹಸಿರಿನ ಕಣಿವೆಗಳು ಘಾಟ್‍ನಲ್ಲಿ ಸಂಚರಿಸುವ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಕಾರಣಕ್ಕೆ ಘಾಟಿ ಉದ್ದಕ್ಕೂ ಪ್ರವಾಸಿಗರ ವಾಹನಗಳ ಸಾಲು ಕಂಡು ಬರುತ್ತಿದೆ. ಇದರಿಂದ ಘಾಟ್ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯೂ ಆಗುತ್ತಿದೆ. ದೂರದ ಪ್ರವಾಸಿಗರು ಚಾರ್ಮಾಡಿ ಘಾಟ್ ಉದ್ದಕ್ಕೂ ಇರುವ ಜಲಪಾತದ ನೀರು, ತುಂತುರು ಮಳೆಯಲ್ಲಿ ಹಾಡು ಹಾಕಿಕೊಂಡು ನೃತ್ಯ ಮಾಡಿರುವ ಘಟನೆ ರವಿವಾರ ಕಂಡು ಬಂದಿದ್ದು, ಇದು ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಮೈಮರೆಯುತ್ತಿರುವ ಪ್ರವಾಸಿಗರ ಈ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಮತ್ತೆ ಹೆಚ್ಚುವ ಆತಂಕ ವ್ಯಕ್ತಪಡಿಸಿದ್ದಾರೆ.

ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತವೇ, ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿಕೊಳ್ಳುವುದರಿಂದ ಬೇರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹಾಡು ಹಾಕಿಕೊಂಡು ನೃತ್ಯ ಮಾಡುವುದರಿಂದ, ಘಾಟ್‍ನ ಕಣಿವೆಯ ಬಂಡೆಗಳಲ್ಲಿ ಸೆಲ್ಫಿಗೆ ಮುಗಿಬೀಳುತ್ತಿರುವದರಿಂದ ಅಪಾಯ ಸಂಭವಿಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದು, ಪ್ರವಾಸಿಗರಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಅನೇಕ ಅಪಾಯಕಾರಿ ಸ್ಥಳಗಳಿದ್ದು, ಈ ಪ್ರದೇಶಕ್ಕೆ ಜನರು ಹೋಗದಂತೆ ಸೂಚನ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಪ್ರವಾಸಿಗರು ಇದನ್ನು ಲೆಕ್ಕಿಸದೇ ಜಲಪಾತಗಳ ಬಂಡೆಗಳ ಮೇಲೆ ನಿಂತು ಪೋಟೋ ಕ್ಲಿಕಿಸಿಕೊಳ್ಳುತ್ತಾರೆ. ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಪ್ರವಾಸಿಗರ ಇಂತಹ ವರ್ತನೆಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆಗೆ ಮಾರ್ಷಲ್‍ಗಳನ್ನು ಜಿಲ್ಲಾಡಳಿತ ನಿಯೋಜಿಸಿದೆ. ಆದರೆ ಚಾರ್ಮಾಡಿ ವ್ಯಾಪ್ತಿಯಲ್ಲಿ ಪ್ರವಾಸಿಗರ ವರ್ತನೆಗೆ ಕಡಿವಾಣ ಹಾಕುವವರು ಯಾರೂ ಇಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News