ಅಶ್ಲೀಲ ಚಿತ್ರಗಳ ತಯಾರಿ ಪ್ರಕರಣ: ರಾಜ್ ಕುಂದ್ರಾ ಜುಲೈ 23ರ ತನಕ ಪೊಲೀಸ್ ಕಸ್ಟಡಿಗೆ

Update: 2021-07-20 12:07 GMT

ಮುಂಬೈ: ಅಶ್ಲೀಲ ಚಿತ್ರಗಳನ್ನು(ನೀಲಿ ಚಿತ್ರ)ತಯಾರಿಸಿದ ಹಾಗೂ ಕೆಲವು ಆ್ಯಪ್ ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು ಜುಲೈ 23ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಪೊಲೀಸರು ಮತ್ತೊಬ್ಬ ಆರೋಪಿ ರಿಯಾನ್ ಜಾನ್ ನನ್ನು ಬಂಧಿಸಿದ್ದು ಆತನನ್ನು ಜುಲೈ 23ರ ತನಕ ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದೆ. ಕುಂದ್ರಾ ಹಾಗೂ ರಿಯಾನ್ ನನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ಪ್ರಕರಣದಲ್ಲಿ ಕುಂದ್ರಾ ಅವರೇ ಪ್ರಮುಖ ಆರೋಪಿ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಶ್ಲೀಲ ಚಿತ್ರಗಳ ತಯಾರಿ ಹಾಗೂ ಅವುಗಳನ್ನು ಕೆಲವು ಅಪ್ಲಿಕೇಶನ್ ಗಳ ಮೂಲಕ ಬಿತ್ತರಿಸುತ್ತಿರುವ ಕುರಿತಾಗಿ 2021ರ ಫೆಬ್ರವರಿಯಲ್ಲಿ ಮುಂಬೈ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News