ಕಾಂಗ್ರೆಸ್ ದ್ರೋಹದ ಇತಿಹಾಸ ಎಂ.ಬಿ.ಪಾಟೀಲ್ ಅವಲೋಕಿಸಲಿ: ಬಿಜೆಪಿ ತಿರುಗೇಟು

Update: 2021-07-20 12:17 GMT

ಬೆಂಗಳೂರು, ಜು.20: ವೀರೇಂದ್ರ ಪಾಟೀಲ್‍ರನ್ನು ಸಿಎಂ ಸ್ಥಾನದಿಂದ ಅವಮಾನಕರ ರೀತಿಯಲ್ಲಿ ಬದಲಾಯಿಸುವ ಮೂಲಕ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ದ್ರೋಹ ಬಗೆದಿತ್ತು. ಲಿಂಗಾಯತ ಸಮುದಾಯದವರಿಗೆ ಸಿಎಂ ಪದವಿಯ ಅವಕಾಶವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ತಪ್ಪಿಸಿದೆ. ಎಂ.ಬಿ.ಪಾಟೀಲ್ ಅವರೇ, ಈ ದ್ರೋಹದ ಇತಿಹಾಸವನ್ನು ಅವಲೋಕಿಸಿ ಎಂದು ಬಿಜೆಪಿ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಬಿಜೆಪಿ, ಸುಳ್ಳು ಹಾಗೂ ಕಪಟಕ್ಕೆ ಮತ್ತೊಂದು ಹೆಸರೇ ಎಂ.ಬಿ.ಪಾಟೀಲ್. ಧರ್ಮ ವಿಭಜನೆಗೆ ಸ್ವಾಮೀಜಿಗಳು ಬೆಂಬಲಿಸಿದ್ದಾರೆ ಎಂಬ ಸುಳ್ಳಿನ ಮೂಲಕ ಸಮಾಜದ ದಾರಿ ತಪ್ಪಿಸಿದ್ದರು. ಯಡಿಯೂರಪ್ಪ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದರು. ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವುದರ ಹಿಂದೆ ರಾಜಕೀಯ ಲಾಭ ಪಡೆಯುವ ದುರುದ್ದೇಶವಿದೆ ಟೀಕಿಸಿದೆ.
ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಸ್ಥಾಪನೆ ಸಂದರ್ಭದಲ್ಲಿ ಪ್ರಮುಖ ಮಠಾಧೀಶರು ಹಾಗೂ ಪ್ರಮುಖ ಲಿಂಗಾಯತ ನಾಯಕರಿಗೆ ಎಂ.ಬಿ.ಪಾಟೀಲ್ ಅವರು ನೀಡಿದ ಅಗೌರವ, ಆಡಿದ ಮಾತುಗಳನ್ನು ಮತ್ತೆ ನೆನಪಿಸಬೇಕೇ? ಉಂಡ ಮನೆಗೆ ಕನ್ನ ಹಾಕುವ ಎಂ.ಬಿ. ಪಾಟೀಲ್ ಅವರಂತವರು ಕ್ಷಮೆಗೆ ಅನರ್ಹರು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೈ ಹಾಕಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಈ ಹಿಂದೆ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದರು. ಆದರೆ, ಧರ್ಮ ವಿಭಜಕ ಎಂ.ಬಿ.ಪಾಟೀಲ್ ಅದನ್ನು ಸಮರ್ಥಿಸಿಕೊಳ್ಳುವ ಮೂಲಕ ಜಾತಿ ವಿಭಜಕ ಮೀರ್‍ಸಾದಿಕ್ ನಿಗೆ ತಾವು ತಕ್ಕ ಶಿಷ್ಯ ಎಂದು ನಿರೂಪಿಸಿಕೊಂಡರು ಎಂದು ಬಿಜೆಪಿ ಕಿಡಿಗಾರಿದೆ.

‘ನಾನು ಆತ್ಮಸಾಕ್ಷಿಯಾಗಿ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದೇನೆ-ಎಂ.ಬಿ.ಪಾಟೀಲ್’. ಆತ್ಮಸಾಕ್ಷಿ...!? ಹಾಗೆಂದರೇನು ಪಾಟೀಲರೇ? ನೀವು ಸಚಿವರಾಗಿದ್ದಾಗ ಬಿಜೆಪಿಯ ಅತ್ಯುನ್ನತ ನಾಯಕ ಯಡಿಯೂರಪ್ಪ ಅವರಿಗೆ ಬಳಸಿದ ಪದಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಈಗ ಕಣ್ಣೊರೆಸುವ ತಂತ್ರದ ಹಿಂದಿರುವ ರಾಜಕೀಯ ಕುತಂತ್ರವೇನು? ಎಂದು ಬಿಜೆಪಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News