ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಜು.27ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2021-07-20 15:01 GMT

ಬೆಂಗಳೂರು, ಜು.20: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿರುವ ಹೈಕೋರ್ಟ್, ಅಲ್ಲಿಯವರೆಗೂ ತನಿಖೆಯನ್ನು ಮುಕ್ತಾಯಗೊಳಿಸದಂತೆ ಎಸ್‍ಐಟಿಗೆ ಸೂಚಿಸಿದೆ.

ಸೀಡಿ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹಾಗೂ ಪ್ರಕರಣದ ತನಿಖೆ ಮಾಡಲು ಎಸ್‍ಐಟಿ ರಚಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮಂಗಳವಾರ ಹೈಕೋರ್ಟ್ ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಯಾಗಿದ್ದವು.

ಈ ವೇಳೆ ಎಸ್‍ಐಟಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಸೋಮವಾರವೇ ಹೈಕೋರ್ಟ್ ರಿಜಿಸ್ಟಾರ್‍ಗೆ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಆದರೆ, ಸಮಯಾವಕಾಶದ ಕೊರತೆಯಾದ್ದರಿಂದ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿತು. ಅಲ್ಲದೆ, ಎಸ್‍ಐಟಿ ಈ ಹಿಂದೆ ನೀಡಿರುವ ಭgವಸೆಯಂತೆ ಜು.27ರವರೆಗೆ ತನಿಖೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಸೂಚಿಸಿತು.

ಜು.16ರಂದು ನಡೆದಿದ್ದ ವಿಚಾರಣೆ ವೇಳೆ ಪೀಠ, ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ಎಸ್‍ಐಟಿ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸುವ ಮುನ್ನ ಎಸ್‍ಐಟಿ ಯಾವ ರೀತಿ ತನಿಖೆ ನಡೆಸಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಹೀಗಾಗಿ, ಸಂಪೂರ್ಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರಕಾರಕ್ಕೆ ಸೂಚಿಸಿತ್ತು. ಅದರಂತೆ ಜುಲೈ 19ರಂದು ಎಸ್‍ಐಟಿ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಎಫ್‍ಐಆರ್‍ಗಳ ಕುರಿತು ಎಸ್‍ಐಟಿ ನಡೆಸಿರುವ ತನಿಖಾ ವರದಿಯನ್ನು ರಿಜಿಸ್ಟ್ರಾರ್ ಜನರಲ್‍ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News