ಫೋನ್ ಕದ್ದಾಲಿಕೆ ಸಂಸ್ಕೃತಿ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ: ಡಿಸಿಎಂ ಅಶ್ವತ್ಥನಾರಾಯಣ

Update: 2021-07-20 16:17 GMT

ಬೆಂಗಳೂರು, ಜು.20: ಕಾಂಗ್ರೆಸ್ ಪಕ್ಷ ಮತ್ತು ಇತರ ಕೆಲವು ಸಂಘಟನೆಗಳು ಕೇಂದ್ರದ ಬಿಜೆಪಿ ಸರಕಾರ ಮತ್ತು ಪಕ್ಷದ ಮೇಲೆ ಪ್ರಮುಖ ವ್ಯಕ್ತಿಗಳ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದು ಅದು ಸಂಪೂರ್ಣವಾಗಿ ನಿರಾಧಾರವಾದುದು ಹಾಗೂ ಸತ್ಯಕ್ಕೆ ದೂರವಾದುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಈ ಸಂಬಂಧ ಸಾಕ್ಷಿ ಅಥವಾ ಆಧಾರ ನೀಡಿಲ್ಲ. ಫೋನ್ ಕದ್ದಾಲಿಕೆ ಸಂಸ್ಕೃತಿ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ ಎಂದು ಆರೋಪಿಸಿದರು.

2013ರಲ್ಲಿ ಕಾಂಗ್ರೆಸ್ ಮೈತ್ರಿಕೂಟ (ಯುಪಿಎ) ಆಡಳಿತದಲ್ಲಿದ್ದಾಗ ಯುಪಿಎ ಸರಕಾರವು ಪ್ರತಿ ತಿಂಗಳು ಸುಮಾರು 9,000 ಪೋನ್‍ಗಳ ಕದ್ದಾಲಿಕೆ ಮತ್ತು 500 ಇಮೇಲ್ ಖಾತೆಗಳ ಮೇಲೆ ಕಣ್ಗಾವಲು ಇಡುತ್ತಿದ್ದುದಾಗಿ ನಮ್ಮ ಪಕ್ಷದ ನಾಯಕರು ಮಾಹಿತಿ ಹಕ್ಕು ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರ ಲಭಿಸಿದೆ ಎಂದ ಅವರು, ಯುಪಿಎ ಆಡಳಿತದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಸಚಿವರ ಮೇಲೆ ಮತ್ತು ನಾಯಕರ ವಿರುದ್ಧ ಕದ್ದಾಲಿಕೆ ನಡೆಸಲಾಗುತ್ತಿತ್ತು ಎಂದರು.

ನಮ್ಮ ಸರಕಾರ ಮತ್ತು ದೇಶದ ಮೇಲೆ ಇಲ್ಲಸಲ್ಲದ ಆರೋಪ ಮಾಡಲು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಯತ್ನಿಸುತ್ತಿದೆ. ಅಂಕಿ ಅಂಶ ಲೀಕ್ ಆಗುತ್ತಿದೆ ಎಂದು ಆರೋಪಿಸುತ್ತಿದ್ದು, ಅದಕ್ಕೂ ಸರಕಾರಕ್ಕೂ ಸಂಬಂಧವೇನು ಎಂದು ಪ್ರಶ್ನಿಸಿದ ಅವರು, ಡಾಟಾಬೇಸ್ ಹ್ಯಾಕ್ ಮತ್ತು ಲೀಕ್ ಆಗುತ್ತಿದ್ದರೆ ಕದ್ದಾಲಿಕೆ ಎಂದು ಆರೋಪ ಮಾಡುವುದು ಎಷ್ಟು ಸರಿ ಎಂದು ಕೇಳಿದರು.

ವಾಟ್ಸ್ ಅಪ್ ಹ್ಯಾಕ್ ಮಾಡಿ ಮಾಹಿತಿ ಸೋರಿಕೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ವಕೀಲರೂ ಆದ ಕಪಿಲ್ ಸಿಬಲ್ ಅವರೇ ಸುಪ್ರೀಂ ಕೋರ್ಟ್ ಮುಂದೆ ತಿಳಿಸಿದ್ದಾರೆ. ಫೋನ್ ಕದ್ದಾಲಿಕೆಯನ್ನು ಟೆಲಿಗ್ರಾಫ್ ಕಾಯ್ದೆಯಡಿ ಮಾತ್ರ ಮಾಡಲು ಸಾಧ್ಯವಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಪೆಗಸಿಸ್ ಸಂಸ್ಥೆಯ ಸಾಫ್ಟ್‍ವೇರ್ 45 ದೇಶಗಳಲ್ಲಿ ಬಳಕೆ ಆಗುತ್ತಿದೆ. ಕೇವಲ ಸಮಸ್ಯೆ ನಿರ್ಮಿಸಲು ಮತ್ತು ದೇಶಕ್ಕೆ ಅಗೌರವ ತರಲು ಹಾಗೂ ಸದನ ನಡೆಯದಂತೆ ತಡೆಯಲು ಇಂಥ ಆರೋಪ ಮಾಡಿದ್ದಾರೆ. ಪ್ರಧಾನಿಯವರು ತಮ್ಮ ಸಚಿವ ಸಂಪುಟದ ನೂತನ ಸದಸ್ಯರನ್ನು ಸದನಕ್ಕೆ ಪರಿಚಯಿಸಲು ಮುಂದಾದಾಗ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇದು ಖಂಡನೀಯ. ನಮ್ಮ ಸರಕಾರದ ವಿರುದ್ಧ ಅಪಪ್ರಚಾರಕ್ಕೆ ದೇಶದ್ರೋಹಿಗಳು ಮತ್ತು ವಿದೇಶಿ ಏಜೆಂಟರು ಯತ್ನಿಸುತ್ತಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News