ಭಯೋತ್ಪಾದನೆ ಕುರಿತ ಕ್ರಿಯಾ ಯೋಜನೆ ಶೀಘ್ರ ಪೂರ್ಣಗೊಳಿಸಲು ಪಾಕ್ ಗೆ ಅಮೆರಿಕ ಸೂಚನೆ

Update: 2021-07-20 16:34 GMT

 ವಾಷಿಂಗ್ಟನ್, ಜು.20: ವಿಶ್ವಸಂಸ್ಥೆ ಹೆಸರಿಸಿರುವ ಭಯೋತ್ಪಾದಕ ಗುಂಪಿನ ಹಾಗೂ ಭಯೋತ್ಪಾದಕರ ವಿರುದ್ಧ ಕಾನೂನು ಕ್ರಮ, ಉಗ್ರರಿಗೆ ಆರ್ಥಿಕ ನೆರವು ಪೂರೈಕೆ ವಿರುದ್ಧ ತನಿಖೆ ನಡೆಸುವುದು ಸೇರಿದಂತೆ ಭಯೋತ್ಪಾದನೆ ಕುರಿತು ಎಫ್ಎಟಿಎಫ್ ತಿಳಿಸಿರುವ 27 ಅಂಶಗಳ ಕಾರ್ಯಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಮೆರಿಕವು ಪಾಕಿಸ್ತಾನಕ್ಕೆ ಸೂಚಿಸಿದೆ.

ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೆರವು ನೀಡುವುದರ ವಿರುದ್ಧದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್), ಭಯೋತ್ಪಾದಕರಿಗೆ ಹಣಕಾಸು ಪೂರೈಕೆಯಾಗುವುದನ್ನು ತಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಬೂದುಪಟ್ಟಿಯಲ್ಲೇ ಮುಂದುವರಿಸಿದೆ. ಪಾಕ್ನಲ್ಲಿ ನೆಲೆ ಹೊಂದಿರುವ, ವಿಶ್ವಸಂಸ್ಥೆ ಹೆಸರಿಸಿರುವ ಭಯೋತ್ಪಾದಕರಾದ ಜೈಷೆ ಮುಹಮ್ಮದ್(ಜೆಇಎಂ) ಮುಖ್ಯಸ್ಥ ಮಸೂದ್ ಅಝರ್, ಲಷ್ಕರೆ ತೈಯಬ್ಬಾ(ಎಲ್ಇಟಿ) ದ ಸ್ಥಾಪಕ ಹಫೀಝ್ ಸಯೀದ್, ಎಲ್ಇಟಿ ಕಾರ್ಯಾಚರಣೆ ಕಮಾಂಡರ್ ರೆಹ್ಮಾನ್ ಲಖ್ವಿ ವಿರುದ್ಧ ತನಿಖೆ ನಡೆಸಿ ಕಾನೂನುಕ್ರಮ ಜರಗಿಸುವಂತೆ ಎಫ್ಎಟಿಎಫ್ ಪಾಕ್ ಸರಕಾರವನ್ನು ಆಗ್ರಹಿಸಿದೆ. ಈ ಮೂವರು ಉಗ್ರರೂ 26/11ರ ಮುಂಬೈ ದಾಳಿ ಸಹಿತ ಭಾರತದಲ್ಲಿ ನಡೆದ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಶಾಮೀಲಾಗಿದ್ದು ಮೋಸ್ಟ್ ವಾಂೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿದ್ದಾರೆ.

 ಎಫ್ಎಟಿಎಫ್ನ ಪ್ರಥಮ ಕಾರ್ಯಯೋಜನೆಯ ಬಗ್ಗೆ ಪಾಕಿಸ್ತಾನ ಕೆಲವು ಉಪಕ್ರಮ ಆರಂಭಿಸಿದ್ದರೂ, ಎರಡನೇ ಕಾರ್ಯಯೋಜನೆಯ ಬಗ್ಗೆಯೂ ಗಮನ ಹರಿಸಬೇಕಾಗಿದೆ . ಮೊದಲ ಕಾರ್ಯಯೋಜನೆಯ ಬಗ್ಗೆ ಪಾಕ್ ನ ಪ್ರಯತ್ನದ ಬಗ್ಗೆ ತೃಪ್ತಿಯಿದೆ. ಆದರೆ 27ರಲ್ಲಿ ಇನ್ನೂ 26 ಕಾರ್ಯಯೋಜನೆ ಬಾಕಿಯಿದೆ . ಉಳಿದ ಕಾರ್ಯಯೋಜನೆಯ ಬಗ್ಗೆ ಶೀಘ್ರ ಗಮನ ಹರಿಸಿ ಪೊರ್ಣಗೊಳಿಸಲು ಪಾಕಿಸ್ತಾನವನ್ನು ಹುರಿದುಂಬಿಸುತ್ತೇವೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸೋಮವಾರದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲೇ ಮುಂದುವರಿಸಿರುವುದರಿಂದ ಆ ದೇಶಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್, ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್, ಯುರೋಪಿಯನ್ ಯೂನಿಯನ್ಗಳಿಂದ ಸಂಕಷ್ಟ ಕಾಲದಲ್ಲಿ ಆರ್ಥಿಕ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದನ್ನು ನಿರ್ಬಂಧಿಸುವ ನಿಯಮಗಳಿಗೆ ಬದ್ಧರಾಗದ ದೇಶಗಳ ಪಟ್ಟಿಗೆ ತನ್ನನ್ನು ಸೇರಿಸಿದರೆ ಅರ್ಥವ್ಯವಸ್ಥೆಗೆ ಮತ್ತಷ್ಟು ಹೊಡೆತ ಬೀಳುತ್ತದೆ ಎಂಬುದನ್ನು ಅರಿತಿರುವ ಪಾಕಿಸ್ತಾನ, ಇತ್ತೀಚಿನ ಕೆಲವು ತಿಂಗಳಿಂದ ಬೂದು ಪಟ್ಟಿಯಿಂದ ಹೊರಬರುವ ಪ್ರಯತ್ನ ತೀವ್ರಗೊಳಿಸಿದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಅಪಾಯ ತಪ್ಪಿಸಿಕೊಳ್ಳಲು ಚೀನಾ, ಟರ್ಕಿ ಮತ್ತು ಮಲೇಶ್ಯಾದ ಬೆಂಬಲದಿಂದ ಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News