ರಾಜ್ ಕುಂದ್ರಾ ಬ್ರಿಟನ್ ಮೂಲದ ಬ್ಲೂ ಫಿಲ್ಮ್ ಕಂಪೆನಿಯೊಂದಿಗೆ ನಂಟು ಹೊಂದಿದ್ದರು: ಪೊಲೀಸರು

Update: 2021-07-21 06:40 GMT

ಮುಂಬೈ: ಅಶ್ಲೀಲ ಚಿತ್ರಗಳ ರಚನೆ, ಬಿತ್ತರಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉದ್ಯಮಿ ರಾಜ್ ಕುಂದ್ರಾ ಬ್ರಿಟನ್  ಬ್ಲೂ ಫಿಲ್ಮ್ ಕಂಪೆನಿಯೊಂದಿಗೆ ನಂಟು ಹೊಂದಿದ್ದಾರೆ.  ಕುಂದ್ರಾ ಸಂಬಂಧಿಯ ಮಾಲಕತ್ವದ ಲಂಡನ್ ಮೂಲದ ಸಂಸ್ಥೆಯು ಭಾರತಕ್ಕೆ ಅಶ್ಲೀಲ ವಿಷಯವನ್ನು ಉತ್ಪಾದಿಸುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬಾಲಿವುಡ್ ನಟಿ  ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ (45) ಅವರನ್ನು ಸೋಮವಾರ ರಾತ್ರಿ ಅಪರಾಧ  ವಿಭಾಗವು ಬಂಧಿಸಿದೆ.  ಅಶ್ಲೀಲ ಚಿತ್ರಗಳ ರಚನೆ ಹಾಗೂ ಅವುಗಳನ್ನು  ಕೆಲವು ಆ್ಯಪ್‌ಗಳ ಮೂಲಕ ಬಿತ್ತರಿಸಿದ ಆರೋಪ ಕುಂದ್ರಾ ಎದುರಿಸುತ್ತಿದ್ದಾರೆ.

ಮಂಗಳವಾರ ಕುಂದ್ರಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು,  ನ್ಯಾಯಾಲಯವು ಅವರನ್ನು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಿದೆ.

ರಾಜ್ ಕುಂದ್ರಾ ಅವರ ವಯಾನ್ ಇಂಡಸ್ಟ್ರೀಸ್ ಲಂಡನ್ ಮೂಲದ ಕೆನ್ರಿನ್  ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು,  ಈ ಕಂಪೆನಿಯು 'ಹಾಟ್‌ಶಾಟ್ಸ್' ಆ್ಯಪ್ ನ ಮಾಲಕತ್ವ ಹೊಂದಿದೆ.  ಇದು ಅಶ್ಲೀಲ ಚಿತ್ರಗಳ ಪ್ರಸಾರದಲ್ಲಿ ಭಾಗಿಯಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಕಂಪನಿಯು ಲಂಡನ್‌ನಲ್ಲಿ ನೋಂದಾಯಿತವಾಗಿದ್ದರೂ, ವಿಷಯ ರಚನೆ, ಅಪ್ಲಿಕೇಶನ್‌ನ ಕಾರ್ಯಾಚರಣೆ ಹಾಗೂ  ಅಕೌಂಟಿಂಗ್ ಅನ್ನು ಕುಂದ್ರಾ ಅವರ ವಯಾನ್ ಇಂಡಸ್ಟ್ರೀಸ್ ಮೂಲಕ ನಿರ್ವಹಿಸಲಾಗಿದೆ" ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭಾರಂಬೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೆನ್ರಿನ್  ಕಂಪೆನಿಯು ರಾಜ್ ಕುಂದ್ರಾ ಅವರ ಸೋದರ ಮಾವನ ಒಡೆತನದಲ್ಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ..

ಪೊಲೀಸರು ಎರಡು ವ್ಯಾಪಾರಿ ಸಂಸ್ಥೆಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಫೆಬ್ರವರಿ 4 ರಂದು ಉಪನಗರ ಮುಂಬೈನ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಶ್ಲೀಲ ಚಿತ್ರ ಪ್ರಕರಣದ "ಪ್ರಮುಖ ಸಂಚುಕೋರ"  ರಾಜ್ ಕುಂದ್ರಾ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News