ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂಬ ಕೇಂದ್ರದ ಹೇಳಿಕೆ ಸಂಪೂರ್ಣ ತಪ್ಪು: ವಿಪಕ್ಷಗಳಿಂದ ತಿರುಗೇಟು

Update: 2021-07-21 09:51 GMT
ಸತ್ಯೇಂದರ್ ಜೈನ್

ಹೊಸದಿಲ್ಲಿ: ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಬಗ್ಗೆ ರಾಜ್ಯಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು  ಸಂಸತ್ತಿನಲ್ಲಿ ಕೇಂದ್ರಸರಕಾರದ ಹೇಳಿಕೆಯು  ವಿಪಕ್ಷಗಳನ್ನು ಕೆರಳಿಸಿದೆ. ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಭಾರತದಲ್ಲಿನ ಆಸ್ಪತ್ರೆಗಳು ಹಾಗೂ ರೋಗಿಗಳ ಪರದಾಟವು ವಿಶ್ವದ ಗಮನ ಸೆಳೆದಿರುವಾಗ ಕೇಂದ್ರದ ಹೇಳಿಕೆಯು  ಭಾರೀ ಚರ್ಚೆಗೆ ಕಾರಣವಾಗಿದೆ.

ಆಮ್ಲಜನಕದ ಕೊರತೆಯು ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದಲ್ಲಿ ಅನೇಕ ಸಾವುಗಳಿಗೆ ಕಾರಣವಾಗಿದೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಇಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

"ಆಮ್ಲಜನಕದ ಬಿಕ್ಕಟ್ಟಿನಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಹೇಳುವುದು ಸಂಪೂರ್ಣವಾಗಿ ಸುಳ್ಳು. ಆಸ್ಪತ್ರೆಗಳು ಹತಾಶೆಯಿಂದ ಪ್ರತಿದಿನ ಹೈಕೋರ್ಟ್‌ನಲ್ಲಿ ಏಕೆ ಮೇಲ್ಮನವಿ ಸಲ್ಲಿಸುತ್ತಿದ್ದವು? ಕೊರೋನ ಸಾಂಕ್ರಾಮಿಕ ರೋಗವಿಲ್ಲ ಎಂದು ಕೇಂದ್ರವು ಶೀಘ್ರದಲ್ಲೇ ಘೋಷಿಸಬಹುದು" ಎಂದು ಜೈನ್ ವ್ಯಂಗ್ಯವಾಡಿದರು..

"ದಿಲ್ಲಿಯಲ್ಲಿ ನಾವು (ಲೆಕ್ಕಪರಿಶೋಧಕ) ಸಮಿತಿಯನ್ನು ರಚಿಸಿದ್ದೆವು. ಸಮಿತಿ ಇನ್ನೂ ಇದ್ದಿದ್ದರೆ, ಡೇಟಾವನ್ನು ಸುಲಭವಾಗಿ ಒದಗಿಸಬಹುದಿತ್ತು. ಆದರೆ ಕೇಂದ್ರ ಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ವರದಿಯನ್ನು ಸಲ್ಲಿಸಲು ಅನುಮತಿಸಲಿಲ್ಲ" ಎಂದು ಜೈನ್ ಹೇಳಿದರು.

ಮಂಗಳವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಕಿರಿಯ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಆರೋಗ್ಯವು ರಾಜ್ಯದ ವಿಷಯವಾಗಿದೆ ಹಾಗೂ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೇಂದ್ರಕ್ಕೆ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ವರದಿ ಮಾಡುತ್ತವೆ ಎಂದು ಹೇಳಿದ್ದರು. "ಆದಾಗ್ಯೂ, ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳಿಂದ ನಿರ್ದಿಷ್ಟವಾಗಿ ವರದಿಯಾಗಿಲ್ಲ" ಎಂದು ಹೇಳಿದ್ದರು.

ಕೊರೋನದ 2ನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವ ಕೋವಿಡ್ ರೋಗಿಗಳ ಬಂಧುಗಳು ಕೇಂದ್ರ ಸರಕಾರವನ್ನು  ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಬೇಕೆಂದು ಹೇಳಿದ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್, ಅಮ್ಲಜನಕ ಕೊರತೆಯಿಂದ ಸಾವು  ಸಂಭವಿಸಿಲ್ಲ ಎಂದು ಸಂಸತ್ತಿಗೆ ಕೇಂದ್ರ ನೀಡಿರುವ ಮಾಹಿತಿಯನ್ನು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದವರ ಸಂಬಂಧಿಕರು ಹೇಗೆ ಸ್ವೀಕರಿಸುತ್ತಾರೆಂದು ಪತ್ತೆ ಮಾಡಬೇಕಾಗಿದೆ  ಎಂದರು.

ಅಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸಿದ್ದರೂ ಕೇಂದ್ರ ಸರಕಾರವು ಸತ್ಯವನ್ನು ಮರೆ ಮಾಚುತ್ತಿದೆ. ಇದು ಪೆಗಾಸಸ್(ಇಸ್ರೇಲ್ ನ ಸ್ಪೈವೇರ್)ಪರಿಣಾಮ ಎಂದು ನಾನು  ಭಾವಿಸುತ್ತೇನೆ ಎಂದು ರಾವತ್ ವ್ಯಂಗ್ಯವಾಡಿದರು.

ಕೊರೋನ ಎರಡನೇ ಅಲೆಯ ವೇಳೆ  ದೇಶದಲ್ಲಿ ಯಾವುದೇ ಆಮ್ಲಜನಕ ಬಿಕ್ಕಟ್ಟು ಇರಲಿಲ್ಲ ಎಂದು ಕೇಂದ್ರವು ಸುಳ್ಳು ಹೇಳಿದೆ. ಸರಕಾರವು ತನ್ನ ತಪ್ಪನ್ನು ಮರೆಮಾಡಲು ಪ್ರಯತ್ನಿಸುತ್ತಿದೆ.  ಅದರ ನೀತಿ ಒಂದು ವಿಪತ್ತು ಆಗಿದೆ ಎಂದು ಅವರು ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News