ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿದಿರುವುದು ಅಪಾಯಕಾರಿ: ಎಚ್.ಡಿ.ಕುಮಾರಸ್ವಾಮಿ

Update: 2021-07-21 11:49 GMT

ಬೆಂಗಳೂರು, ಜು. 21: `ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕದು ಎಂಬುದಕ್ಕೆ ಖಚಿತತೆ ಇದೆಯೇ? ಅಂತ ದಿನ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ. ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಕೊನೆಗೆ ನನ್ನ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ' ಎಂದು ಟೀಕಿಸಿದ್ದಾರೆ.

`ಪೆಗಾಸಸ್ ಗೂಢಚರ್ಯೆಯಲ್ಲಿ ಕೇಂದ್ರ ಸರಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಗುಟ್ಟೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರಕಾರ ಕೆಡವಿ, ಸರಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು' ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News