ಸಿಎಂ ಬದಲಾದರೆ, ಮುಂಬೈ ತಂಡದ ಯಾರೊಬ್ಬರನ್ನು ಮಂತ್ರಿ ಮಾಡಬಾರದು: ಎಚ್.ವಿಶ್ವನಾಥ್

Update: 2021-07-21 12:23 GMT

ಬೆಂಗಳೂರು, ಜು. 21: `ಯಡಿಯೂರಪ್ಪ ಮಾತ್ರವಲ್ಲ, ಬರಲಿರುವ ಸರಕಾರದಲ್ಲಿ ಮುಂಬೈ ತಂಡದ ಶಾಸಕರಿಗೂ ಮಂತ್ರಿಗಿರಿ ಕೊಡಬೇಡಿ. ಯಾವ ಕಾರಣಕ್ಕಾಗಿ ನಾವು ಬಿಜೆಪಿಗೆ ಬಂದೆವು ಎಂಬುದನ್ನೇ ಎಲ್ಲರೂ ಮರೆತಿದ್ದಾರೆ. ಮುಂಬೈ ಟೀಮಿಗೆ ನಾಯಕರಾಗಿದ್ದವರು ಬಿ.ವೈ.ವಿಜಯೇಂದ್ರ ಅವರೇ ಈಗಿನ ಸರಕಾರದಲ್ಲಿ ಮುಖ್ಯಮಂತ್ರಿಗಿರಿ ಮಾಡಿದರು' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, `ವಿಜಯೇಂದ್ರ ಅವರ ಜತೆಗಿದ್ದ ಮುಂಬೈ ಟೀಮಿನವರಿಗೆ ಪುನಃ ಮಂತ್ರಿಗಿರಿ ಕೊಡಬೇಡಿ. ಅವರೆಲ್ಲಿಗೂ ಹೋಗಲಾರರು. ಯಡಿಯೂರಪ್ಪ ಪದಚ್ಯುತಿಗೆ ಮಠಾಧೀಶರ ವಿರೋಧದ ಸರಿಯಲ್ಲ. ಮಠಗಳಲ್ಲಿ ಹಿರಿಯ ಸ್ವಾಮೀಜಿ ಶಿವೈಕ್ಯರಾದರೆ ಉತ್ತರಾಧಿಕಾರಿಗಳ ಆಯ್ಕೆ ಮಾಡುತ್ತೀರಲ್ಲ? ಆಗ ಯಾರಾದರೂ ಅಡ್ಡ ಬರುತ್ತಾರಾ?
ಹಾಗೆಯೇ ಒಂದು ಪಕ್ಷ ಸಂವಿಧಾನಬದ್ಧವಾಗಿ ಉತ್ತರಾಧಿಕಾರಿಯನ್ನು ಹುಡುಕಿಕೊಳ್ಳುತ್ತಿರುವಾಗ ನೀವೇಕೆ ಅಡ್ಡಿ ಮಾಡುತ್ತೀರಿ?' ಎಂದು ಪ್ರಶ್ನಿಸಿದರು.

`ಯಡಿಯೂರಪ್ಪ ಇಳಿದರೆ ಶೂನ್ಯ ಎಂದು ಹೇಳುತ್ತೀರಲ್ಲ? ಯಾವ ಶೂನ್ಯವೂ ಇಲ್ಲ, ಗೀನ್ಯವೂ ಇಲ್ಲ, ಅಂಬೇಡ್ಕರ್ ಸಂವಿಧಾನ ಇರುವಾಗ ಶೂನ್ಯ ಎಂಬ ಮಾತೇ ಇಲ್ಲ' ಎಂದ ಎಚ್.ವಿಶ್ವನಾಥ್, `ಯಡಿಯೂರಪ್ಪ ಒಬ್ಬರೇ ಪಾರ್ಟಿ ಕಟ್ಟಿಲ್ಲ. ಹಿರಿಯ ಮುಖಂಡರಾದ ಬಿ.ಬಿ.ಶಿವಪ್ಪ, ಎ.ಕೆ.ಸುಬ್ಬಯ್ಯ, ಮಲ್ಲಿಕಾರ್ಜುನಯ್ಯ, ಡಿ.ಎಚ್.ಶಂಕರಮೂರ್ತಿ, ಧನಂಜಯ ಕುಮಾರ್.. ಹೀಗೆ ಬಿಜೆಪಿ ಕಟ್ಟಿದ ನಾಯಕರ ದಂಡೇ ಇದೆ. ಯಡಿಯೂರಪ್ಪ ಅವರಲ್ಲೊಬ್ಬರು ಅಷ್ಟೇ' ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News