ಬಿಜೆಪಿಯಿಂದ ದೇಶದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ: ಕಾಂಗ್ರೆಸ್ ಆರೋಪ

Update: 2021-07-21 13:04 GMT

ಬೆಂಗಳೂರು, ಜು. 21: `ಇತ್ತೀಚೆಗೆ ಬಿಜೆಪಿ ಶಾಸಕ ಬೆಲ್ಲದ್ ಅವರು ನನ್ನ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪಿಸಿದ್ದರು, ಸ್ವತಃ ತಮ್ಮದೇ ಶಾಸಕರ ಗೂಢಚಾರಿಕೆ ನಡೆಸುವ ಬಿಜೆಪಿ ಸರಕಾರ ವಿಪಕ್ಷ ನಾಯಕರನ್ನು ಬಿಟ್ಟೀತೇ?

ಕ್ಷುದ್ರ ರಾಜಕಾರಣಕ್ಕೆ ಮುನ್ನುಡಿ ಬರೆದ ಬಿಜೆಪಿಯಿಂದ ದೇಶದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ' ಎಂದು ಕಾಂಗ್ರೆಸ್ ಆಪಾದಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಪೆಗಾಸಸ್ ಗೂಢಚಾರಿಕೆ ಅತ್ಯಂತ ಗಂಭೀರ, ದೇಶದ ಭದ್ರತೆಗೇ ಧಕ್ಕೆ ತರುವಂತಹ ಪ್ರಕರಣ. ಈ ಬೆಳವಣಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಬಲ್ಲದು. ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಪ್ರಕರಣವನ್ನು ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದೆ.

`ತಮ್ಮವರಿಂದಲೇ `ಬ್ಲಾಕ್‍ಮೇಲ್ ಜನತಾ ಪಾರ್ಟಿ' ಎನಿಸಿಕೊಂಡ ಬಿಜೆಪಿ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಘನತೆಗೆ ಚ್ಯುತಿ ತರುವ ಯಾವುದೇ ಅನೈತಿಕ ಕೃತ್ಯಕ್ಕೂ ಕೈ ಹಾಕುವುದೆಂದು ಈಗಾಗಲೇ ಹಲವು ವಿಷಯಗಳಲ್ಲಿ ಸಾಬೀತು ಮಾಡಿದೆ.

ಬಿಜೆಪಿಯ ಪೆಗಾಸಸ್‍ ನಂತಹ ನೀಚ ಕೃತ್ಯ ಪ್ರಜಾಪ್ರಭುತ್ವದಲ್ಲಿ ಸಹಿಸಲಾಗದ ಸಂಗತಿ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
`ಜಗತ್ತಿನಾದ್ಯಂತ ಹಲವು ದೇಶದಲ್ಲಿ ಪೆಗಾಸಸ್ ಗೂಡಾಚಾರಿಕೆ ಹಗರಣ ನಡೆದಿರುವ ಸಂಗತಿ ಬೆಳಕಿದೆ ಬಂದಿದೆ, ಫ್ರಾನ್ಸ್ ತಡಮಾಡದೆ ಹಗರಣದ ತನಿಖೆಗೆ ಮುಂದಾಗಿದೆ. ಆದರೆ ಭಾರತದಲ್ಲಿ ತನಿಖೆಗೆ ಕೇಂದ್ರ ಸರಕಾರ ಭಯಪಡುತ್ತಿರುವುದೇಕೆ? ತನಿಖೆ ನಡೆದರೆ ತಮ್ಮ ಬಂಡವಾಳ ಬಯಲಾಗುವ ಆತಂಕವಿದೆ ಬಿಜೆಪಿಗೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

`ಪೆಗಾಸಸ್ ಹಗರಣದ ಬಗ್ಗೆ ಕೇಂದ್ರದ ಬಿಜೆಪಿ ಸರಕಾರ ನಮಗೆ ಸಂಬಂಧವಿಲ್ಲ ಎಂದು ಹೇಳುತ್ತಿದೆ, ಹಾಗಾದರೆ ಅಂತರರಾಷ್ಟ್ರೀಯ ಗೂಡಾಚಾರಿಕೆಯನ್ನು ಭಾರತದ ಒಳಗೆ ಬಿಟ್ಟವರು ಯಾರು? ಸಮ್ಮಿಶ್ರ ಸರಕಾರ ಉರುಳಿಸುವ ಆಸಕ್ತಿ ಇದ್ದಿದ್ದು ಇಸ್ರೇಲಿಗೊ ಅಥವಾ ರಾಜ್ಯ ಬಿಜೆಪಿ ಪಕ್ಷಕ್ಕೋ!? ಈ ಗಂಭೀರ ಹಗರಣದ ತನಿಖೆಗೆ ಏಕೆ ಹಿಂದೇಟು? ಬಿಜೆಪಿ ರಾಜ್ಯದ ಸಮ್ಮಿಶ್ರ ಸರಕಾರ ಉರುಳಿಸಲು ನಡೆಸಿದ ಕಸರತ್ತುಗಳು ಒಂದೆರಡಲ್ಲ. ವಿಪಕ್ಷ ನಾಯಕರ ಫೋನ್‍ಗಳಿಗೆ ಕಳ್ಳಗಿವಿ ಇಡುವುದು,

ಶಾಸಕರ ರೂಮ್‍ಗಳಿಗೆ ಕಳ್ಳ ಕ್ಯಾಮೆರಾ ಇಡುವುದು, ಶಾಸಕರನ್ನು ಹನಿಟ್ರಾಪ್, ಬ್ಲಾಕ್‍ಮೇಲ್ ಮಾಡುವುದು, ಬಿಜೆಪಿ ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ' ಎಂದು ಕಾಂಗ್ರೆಸ್ ಟೀಕಿಸಿದೆ.

`ಪೆಗಾಸಸ್ ಹಗರಣದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ನೇರ ಕೈವಾಡವಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಉರುಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದಿದ್ದು ಸ್ಪಷ್ಟ. ಇಂತಹದ್ದೆ ಸ್ನೂಪ್ ಗೇಟ್ ಹಗರಣ ನಡೆಸಿದ ಇತಿಹಾಸ ಅವರಿಗಿದೆ. ಕೂಡಲೇ ಅಮಿತ್ ಶಾ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News