ಎರಡು ಮೂರು ತಿಂಗಳಲ್ಲಿ ರಾಜ್ಯಾಧ್ಯಂತ 5 ಕೋಟಿ ಜನರಿಗೆ ಲಸಿಕೆ ಗುರಿ: ಸಚಿವ ಡಾ. ಸುಧಾಕರ್

Update: 2021-07-25 16:52 GMT

ಚಿಕ್ಕಬಳ್ಳಾಪುರ: ಪ್ರಸ್ತುತ ರಾಜ್ಯದಲ್ಲಿ ಲಸಿಕೆ ಪಡೆದವರ ಸಂಖ್ಯೆ 3 ಕೋಟಿ ಗುರಿ ತಲುಪಿದ್ದು, ಮುಂದಿನ 2-3 ತಿಂಗಳಲ್ಲಿ 5 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕೊರೊನಾ ಉಚಿತ ಲಸಿಕೆ ಮೆಗಾ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ನಂದಿ ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಎರಡು ಡೋಸ್ ಲಸಿಕೆ ಪಡೆದವರು ಕೊರೊನಾ ಮಾರಣಾಂತಿಕ ರೋಗದಿಂದ ರಕ್ಷಣೆ ಪಡೆಯಬಹುದು. ಇದುವರೆಗೂ ಎರಡು ಡೋಸ್ ಪಡೆದವರಲ್ಲಿ ಯಾರಿಗೂ ತೀವ್ರತರವಾದ ಸಮಸ್ಯೆ ಬಂದಿಲ್ಲ. ಪ್ರಾರಂಭದಲ್ಲಿ ಈ ಲಸಿಕೆ ಬಗ್ಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದರು. ಲಸಿಕೆ ಬಗ್ಗೆ ಜನರಿಗೆ ಧಿಕ್ಕು ತಪ್ಪಿಸುವ ಕೆಲಸ ಮಾಡಿದರು.  ಆದರೆ, ಈಗ ಜನರಿಗೆ ಲಸಿಕೆ ಬಗ್ಗೆ ಅರ್ಥವಾಗಿ ಜನರೇ ಸ್ವಯಂಪ್ರೇರಣೆಯಿಂದ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಮುಂದಿನ ಒಂದೆರಡು ದಿನದಲ್ಲಿ ರಾಜ್ಯದಲ್ಲಿ ಲಸಿಕೆ ಪಡೆದವರ ಸಂಖ್ಯೆ 3 ಕೋಟಿ ಗುರಿ ತಲುಪಲಿದ್ದು, ಮುಂದಿನ 2-3 ತಿಂಗಳಲ್ಲಿ 5 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಎಂಪಿಎಲ್ ಸ್ಫೋಟ್ಸ್ ಸಂಸ್ಥೆಯವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10 ಸಾವಿರ ಜನರಿಗೆ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಮೊದಲ ಹಂತವಾಗಿ 2500 ಲಸಿಕೆಯನ್ನು ಕೊಟ್ಟಿದ್ದಾರೆ. ಇದರಲ್ಲಿ ಚಿಕ್ಕಬಳ್ಳಾಪುರ ನಗರದ ಜನತೆಗೆ 2000 ಲಸಿಕೆ ಹಾಗೂ ಮಂಚೇನಹಳ್ಳಿಯ 500 ಮಂದಿಗೆ ಇಂದು ಲಸಿಕೆ ನೀಡಿದ್ದಾರೆ. ಮುಂದಿನ ವಾರದಲ್ಲಿ 2500 ಜನರಿಗೆ ಲಸಿಕೆ ನೀಡಲಿದೆ. ಈ ಸಂಸ್ಥೆಯು ಇಲ್ಲಿಯವರಿಗೆ ರಾಜ್ಯಾದ್ಯಂತ 1 ಲಕ್ಷ ಜನರಿಗೆ ಉಚಿತವಾಗಿ ಲಸಿಕೆಯನ್ನು ನೀಡಿದೆ. ಇದಕ್ಕೆ ಅಂದಾಜು 10 ಕೋಟಿ ರುಪಾಯಿ ವೆಚ್ಚವಾಗಲಿದೆ. ಅದರ ಸಂಪೂರ್ಣ ವೆಚ್ಚವನ್ನು ಸಂಸ್ಥೆಯವರೇ ಭರಿಸುತ್ತಿದ್ದಾರೆ. ಇದೇ ರೀತಿ ಮತ್ತಷ್ಟು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದು ಸರ್ಕಾರದ ಜತೆಗೆ ಕೈಜೋಡಿಸಬೇಕು. ಲಸಿಕೆಯನ್ನು ಖರೀದಿಸಿ ಮಾಡಿ ಜನರಿಗೆ ಉಚಿತವಾಗಿ ಕೊಡುವಂತಹ ಪ್ರಕ್ರಿಯೆಗಳು ಹೆಚ್ಚಾಗಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರವು ಶೇ.75 ರಷ್ಟು ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿದ್ದು, ಉಳಿದಂತೆ ಶೇ.25 ರಷ್ಟು ಲಸಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ಮೀಸಲಿಟ್ಟಿದೆ. ಹಾಗಾಗಿ ಸ್ವಯಂ ಸೇವಾ ಸಂಸ್ಥೆಗಳು ಈ ಭಾಗದ ಲಸಿಕೆಯನ್ನು ಖರೀಧಿಸಿ ಜನರಿಗೆ ಉಚಿತವಾಗಿ ನೀಡಬೇಕು ಎಂಬುದು ನನ್ನ ಭಾವನೆಯಾಗಿದೆ. ಈ ದಿಸೆಯಲ್ಲಿ ಎಂಪಿಎಲ್ ಸಂಸ್ಥೆಯವರ ಸಾಮಾಜಿಕ ಸೇವೆ ಅತ್ಯಂತ ಶ್ಲಾಘನೀಯ ಎಂದರು.

ಈ ಹಿಂದೆ ಲಸಿಕೆಯನ್ನು ಪಡೆಯುವುದರಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಹಿಂಜರಿಕೆ, ಭಯ, ಆತಂಕ ಇತ್ತು. ಆದರೆ, ಈಗ ಆ ಹಿಂಜರಿಕೆ ದೂರವಾಗಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.

ಎಲ್ಲೆಡೆ ಮಳೆಗಾಲ ಆರಂಭವಾಗಿರುವುದರಿಂದ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಬಂಧ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು ಮೂರು ಸಭೆಗಳನ್ನು ನಡೆಸಿ, ಈ ರೋಗಗಳ ಬಗ್ಗೆ ಹೆಚ್ಚಿನ ಮುಂಜಾಗ್ರತೆಯಿಂದ ಇರಲು ಸೂಚನೆ ನೀಡಿದ್ದೇನೆ. ಪ್ರವಾಹ, ಮಳೆ ಹೆಚ್ಚಾಗುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಗುಣಮಟ್ಟದ ಕುಡಿಯುವ ನೀರು ಒದಗಿಸುವಂತೆ ಹೇಳಿದ್ದೇನೆ. ಅಲ್ಲದೆ ಆ ಭಾಗದ ಜನರಿಗೆ ಅಗತ್ಯವಾದ ಆರೋಗ್ಯ ಔಷಧಗಳನ್ನು ಈಗಾಗಲೇ ರವಾನೆ ಮಾಡಲಾಗಿದೆ ಎಂದರು. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಸೋಮವಾರಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಈ ಎರಡು ವರ್ಷದ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಯ ಜತೆಗೆ ಕೊರೊನಾ ನಿಯಂತ್ರಣವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದೇವೆ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದ್ದು, ನಮ್ಮ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೂ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದರು.

  ಮುಂದಿನ ದಿನಗಳಲ್ಲಿ ಕೊರೊನಾ 3ನೇ ಅಲೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ದೂರ ಇರಬೇಕಾದರೆ ಪ್ರತಿಯೊಬ್ಬರೂ 2 ಡೋಸ್ ಲಸಿಕೆಯನ್ನು ಪಡೆಯಬೇಕು. ಜೊತೆಗೆ ಮಾಸ್ಕ್ ನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಕೂಡ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದು, ಇದೆಲ್ಲರ ಪರಿಣಾಮದಿಂದ ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ  ಯಾವುದೇ ರೀತಿಯ ರಸಗೊಬ್ಬರದ ಸಮಸ್ಯೆ ಉಂಟಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆಯಿಂದ ರೈತರಿಗಾಗಿ ಅನೇಕ ಯೋಜನೆ, ಸೌಲಭ್ಯಗಳನ್ನು ರೂಪಿಸಿದ್ದು, ಎಲ್ಲವೂ ರೈತರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ನೀರಾವರಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಡಿಎಂಎಫ್ಟಿ ಯೋಜನೆಯಡಿ ಸುಮಾರು 50 ಕೋಟಿ ರು. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಇದಲ್ಲದೆ, ನಮ್ಮ ಸರ್ಕಾರವೂ ಕೂಡ ಜಿಲ್ಲೆಯಲ್ಲಿ ನೀರಾವರಿಗೆ ವಿಶೇಷ ಆಸಕ್ತಿ ತೋರುತ್ತಿದೆ. ತಾಲೂಕಿನ ನಂದಿ ಹೋಬಳಿಯಲ್ಲಿ ನೀರಿನ ಸಮಸ್ಯೆ ಇರುವುದಾಗಿ ಕಂಡುಬಂದಿದ್ದು, ದೊಡ್ಡಮರಳಿ, ಅಂಗಟ್ಟ ಸೇರಿದಂತೆ ಈ ಭಾಗದ ಇತರೆ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ವೃಷಭಾವತಿಯಿಂದ ಜಿಲ್ಲೆಗೆ ನೀರು ಹರಿಸಲು ಸರ್ಕಾರ ಚಿಂತನೆ ಮಾಡಿದ್ದು, ಈ ಯೋಜನೆಯಿಂದ 40-50 ಕೆರೆಗಳಿಗೆ ನೀರು ತುಂಬಿಲು  ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಹೇಳಿದರು.

ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿ ಬಯಲು ಸೀಮೆಯ ಜಿಲ್ಲೆಗಳಲ್ಲಿ ನೀರಾವರಿಗೆ ಆಧ್ಯತೆ ನೀಡಬೇಕೆಂದು ಇತ್ತೀಚಿಗೆ ದೆಹಲಿಗೆ ತೆರಳಿಗೆ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಇನ್ನು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ತರಬೇಕೆಂಬುದು ನನ್ನ ಬಯಕೆಯಾಗಿದ್ದು, ಈ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಲ್ಯಾಣ ಕಾರ್ಯ ಕಾರ್ಮಿಕರ ಮಂಡಳಿ ವತಿಯಿಂದ ಕೊರೊನಾ ಸಂಕಷ್ಟದಲ್ಲಿರುವ ಕಟ್ಟಡ ಹಾಗೂ ಇತರೆ ನಿರ್ಮಾಣ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಮತ್ತು ಕೃಷಿ ಇಲಾಖೆಯಿಂದ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಕುರಿತಾದ ಪ್ರಚಾರ ವಾಹನಗಳಿಗೆ ಸಚಿವ ಡಾ.ಕೆ.ಸುಧಾಕರ್ ಅವರು ಚಾಲನೆ ನೀಡಿದರು. 

ಇದೇ ವೇಳೆ ನಗರಸಭೆ ವತಿಯಿಂದ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಗರಿಷ್ಠ ಅಂಕ ಪಡೆದ 153 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯಾಧಿಕಾರಿ ಶ್ರೀನಿವಾಸ್, ಎಂಪಿಎಲ್ ಸ್ಫೋಟ್ಸ್ ಫೌಂಡೇಷನ್ ನ ಮುಖ್ಯಸ್ಥ ಸುರೇಶ್ ವೈದ್ಯನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News