ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿ.ಎಸ್ ಯಡಿಯೂರಪ್ಪ

Update: 2021-07-26 12:01 GMT

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಖ್ಯಮಂತ್ರಿ ಸ್ಥಾನದ ಬದಲಾವಣೆಯ ವಿಚಾರಕ್ಕೆ ತೆರೆ ಬಿದ್ದಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಸರಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲೇ ರಾಜೀನಾಮೆ ಘೋಷಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಲಿಂದ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ನೇರವಾಗಿ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.

ಬಿ.ಎಸ್.ಯಡಿಯೂರಪ್ಪನವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಮುಂದಿನ ಮುಖ್ಯಮಂತ್ರಿ ಅಂತಿಮಗೊಳ್ಳುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ನೀವೇ ಮುಂದುವರೆಯಬೇಕೆಂದು ಸೂಚನೆ ನೀಡಿದ್ದಾರೆ. 2019 ಜುಲೈ 26ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪನವರು ಎರಡು ವರ್ಷ ಪೂರ್ಣಗೊಳ್ಳುತ್ತಿರುವ ದಿನವೇ ಅಧಿಕಾರದಿಂದ ನಿರ್ಗಮಿಸುತ್ತಿರುವುದು ಕಾಕತಾಳಿಯವೇ ಸರಿ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ 105 ಮಂದಿ ಶಾಸಕರನ್ನು ಹೊಂದಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿದ್ದ ಯಡಿಯೂರಪ್ಪನವರು ಅಲ್ಪ ಬಹುಮತದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಿಎಂ ಆಗಿ 2 ವರ್ಷ ಪೂರ್ಣಗೊಳಿಸಿದ ದಿನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದರು.

ನಾಲ್ಕು ಬಾರಿ ಸಿಎಂ ಆಗಿದ್ದು ಬಿಎಸ್‍ವೈ ಹೆಗ್ಗಳಿಕೆ: ಯಡಿಯೂರಪ್ಪನವರು 2007ರಲ್ಲಿ ಒಂದು ವಾರ, 2008ರಲ್ಲಿ ಮೂರು ವರ್ಷ, 2018ರ ಮೇನಲ್ಲಿ 10 ದಿನ ಹಾಗೂ 2019ರಿಂದ 2021ರವರೆಗೆ ಎರಡು ವರ್ಷಗಳ ಅವಧಿ ಅಧಿಕಾರ ನಡೆಸಿದ್ದು, ರಾಜ್ಯದಲ್ಲಿ ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಬಿಎಸ್‍ವೈ ಅವರು ಪಾತ್ರರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ಅವರು ಹಲವು ಏಳು-ಬೀಳುಗಳು, ಆರೋಪಗಳು, ವಿವಾದಗಳನ್ನು ಮೈಮೇಲೆ ಎಳೆದುಕೊಂಡೇ ರಾಜ್ಯ ರಾಜಕೀಯದಲ್ಲಿ ತಮ್ಮದೇ ಅದ ಛಾಪು ಮೂಡಿಸಿದ ಅಪರೂಪದ ರಾಜಕಾರಣಿ. ಸಾಮಾನ್ಯ ಕಾರ್ಯಕರ್ತನಾಗಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ.

ವಿಧಾನಸಭೆಯ ವಿಪಕ್ಷ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ `ಸಮರ್ಥ' ಆಡಳಿತ ನಡೆಸಿದ ನಾಯಕ ಯಡಿಯೂರಪ್ಪ. ಆದರೆ, ಸ್ವಜನ ಪಕ್ಷಪಾತ, ಕುಟುಂಬದವರ ಹಸ್ತಕ್ಷೇಪ, ಭ್ರಷ್ಟಾಚಾರದ ಆರೋಪಗಳು, ಪುತ್ರ ವ್ಯಾಮೋಹ ಅವರನ್ನು ಅನೇಕ ಬಾರಿ ಮುಜುಗರಕ್ಕೆ ಸಿಲುಕಿಸುವಂತೆ ಮಾಡಿದ್ದವು. ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರವಿಲ್ಲ ಎಂಬ ಅಲಿಖಿತ ನಿಯಮವನ್ನು ಮೀರಿ ಎರಡು ವರ್ಷ ಅಧಿಕಾರ ನಡೆಸಿದ್ದು ನಿಜಕ್ಕೂ ಅಚ್ಚರಿಯೇ. ಲಿಂಗಾಯತ ಸಮುದಾಯ `ಪ್ರಶ್ನಾತೀತ ನಾಯಕ'ನೆಂಬ ಹಿರಿಮೆಗೆ ಪಾತ್ರವಾಗಿದ್ದ ಯಡಿಯೂರಪ್ಪನವರ ರಾಜೀನಾಮೆಯಿಂದ ಅವರ ರಾಜಕೀಯದ ಯುಗಾಂತ್ಯವಾದಂತೆ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News