ಅಗ್ನಿ ಪರೀಕ್ಷೆಯ ನಡುವೆಯೂ ಜನಸೇವೆಗೈದ ತೃಪ್ತಿ: ವಿದಾಯ ಭಾಷಣದೊಂದಿಗೆ ವರಿಷ್ಟರ ವಿರುದ್ಧ ಯಡಿಯೂರಪ್ಪ ಅಸಮಾಧಾನ

Update: 2021-07-26 14:33 GMT

ಬೆಂಗಳೂರು, ಜು. 26: `ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ತಿಂಗಳು ಕಳೆದರೂ ಸಂಪುಟ ರಚನೆಗೆ ಅವಕಾಶ ನೀಡಲಿಲ್ಲ. ಪ್ರತಿ ಸಂದರ್ಭದಲ್ಲಿಯೂ ಅಗ್ನಿ ಪರೀಕ್ಷೆಯನ್ನು ಎದುರಿಸಿಯೂ, ಪ್ರವಾಹ ಮತ್ತು ಕೋವಿಡ್ ಸಾಂಕ್ರಾಮಿಕದ ಮಧ್ಯೆ ರಾಜ್ಯದ ಸಿಎಂ ಆಗಿ ಎರಡು ವರ್ಷ ಜನರ ಸೇವೆ ಮಾಡಿದ ತೃಪ್ತಿ ಇದೆ' ಎಂದು ಬಿ.ಎಸ್ ಯಡಿಯೂರಪ್ಪ, ಹೈಕಮಾಂಡ್ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, `ನಾನು ಎಲ್ಲ ಸಂದರ್ಭಗಳಲ್ಲಿಯೂ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆ ಎದುರಿಸುವಂತಾಗಿದೆ. ನಾನು ರಾಜ್ಯದ ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳೇ ಕಳೆದರೂ ಸಂಪುಟ ರಚನೆಗೆ ವರಿಷ್ಟರು ಬಿಡಲಿಲ್ಲ' ಎಂದು ಟೀಕಿಸಿದರು.

`ಸಂಪುಟ ಸಹೋದ್ಯೋಗಿಗಳು ಇಲ್ಲದೆ ನಾನು ಒಂಟಿಯಾಗಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಅತ್ಯಂತ ಸಮರ್ಥವಾಗಿ ಕೆಲಸ ಮಾಡಿದೆ. ಒಂದೂವರೆ ವರ್ಷದಿಂದ ಕೊರೋನ ಸೋಂಕಿನಿಂದ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದರು. ಸಂಪುಟ ಸಚಿವರು, ಅಧಿಕಾರಿಗಳು ಸಹಕಾರದಿಂದ ಉತ್ತಮ ರೀತಿಯಲ್ಲಿ ಸೋಂಕು ತಡೆಗೆ ಶ್ರಮಿಸಿದ್ದೇನೆ' ಎಂದ ಯಡಿಯೂರಪ್ಪ, `ದೇಶದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ ಕರ್ನಾಟಕ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ' ಎಂದು ನುಡಿದರು.

`ನನಗೆ ಎಪತ್ತೈದು ವರ್ಷ ವಯಸ್ಸಾಗಿದ್ದರೂ ಪ್ರಧಾನಿ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಪಕ್ಷದ ವರಿಷ್ಟರು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ನೀಡಿದರು. ಹೀಗಾಗಿ ಎರಡು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ' ಎಂದ ಅವರು, `ರಾಜ್ಯದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಬೇಕಾಗಿದೆ' ಎಂದು ಹೇಳಿದರು.

`ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಉದ್ದಕ್ಕೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿದರೂ 2019ರಲ್ಲಿ ವಿವಿಧ ಕಾರಣಗಳಿಗಾಗಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿಲ್ಲ. ಅದಕ್ಕೆ ನಮ್ಮದೂ ತಪ್ಪಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಶಾಸಕರ ಸಹಕಾರದಿಂದ ಸರಕಾರ ರಚನೆ ಮಾಡಿದೆವು' ಎಂದ ಹೇಳಿದ ಯಡಿಯೂರಪ್ಪ, `ಮುಂದಿನ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಬಿಜೆಪಿ 130 ಸ್ಥಾನಗಳನ್ನು ತಂದುಕೊಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವು ಸಂಕಲ್ಪ ಮಾಡಿದ್ದೇನೆ' ಎಂದು ಘೋಷಿಸಿದರು.

`ಯಾವುದೇ ರೀತಿಯ ಅಗ್ನಿ ಪರೀಕ್ಷೆ ಎದುರಾದರೂ ಎದೆಗುಂದದೆ ಕಾರ್ಯನಿರ್ವಹಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೆಲಸ ಮಾಡಬೇಕಿದೆ. ಕೋವಿಡ್ ಸಂಕಷ್ಟದಿಂದ ಒಂದೂವರೆ ವರ್ಷದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಡೀಕರಣ ಸಾಧ್ಯವಾಗಿಲ್ಲ. ವ್ಯಾಪಾರವೂ ಸ್ಥಗಿತಗೊಂಡಿತ್ತು. ಈ ಸಂದಿಗ್ಧತೆಯ ನಡುವೆಯೇ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶಕ್ತಿ ಮೀರಿ ಶ್ರಮಿಸಿದ್ದೇನೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಇನ್ನೂ ಶ್ರಮಿಸಬೇಕಿದೆ'

-ಬಿ.ಎಸ್.ಯಡಿಯೂರಪ್ಪ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News