ಹೊಸ ನಾಯಕನ ಆಯ್ಕೆಗೆ ಬಿಜೆಪಿ ವರಿಷ್ಟರ ಕಸರತ್ತು

Update: 2021-07-26 15:40 GMT

ಬೆಂಗಳೂರು, ಜು. 26: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೆ ಆ ಸ್ಥಾನಕ್ಕೆ ಪರ್ಯಾಯ ನಾಯಕನ ಆಯ್ಕೆ ಬಿಜೆಪಿ ವರಿಷ್ಟರಿಗೆ ತೀವ್ರ ತಲೆನೋವು ತಂದಿಟ್ಟಿದ್ದು, ನಾಳೆ(ಜು.27) ಬೆಳಗ್ಗೆ ಹೊಸ ನಾಯಕನ ಆಯ್ಕೆ ಸಾಧ್ಯತೆಗಳಿವೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಮುರುಗೇಶ್ ನಿರಾಣಿ, ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಹಿತ ಹಲವು ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಯಾರನ್ನು ಆಯ್ಕೆ ಮಾಡಿದರೆ ಭವಿಷ್ಯದಲ್ಲಿ ಪಕ್ಷ ಹಾಗೂ ಸರಕಾರವನ್ನು ಮುನ್ನಡೆಸಲು ಅನುಕೂಲ ಎಂಬ ನಿಟ್ಟಿನಲ್ಲಿ ವರಿಷ್ಟರು ಅಲೆದು-ತೂಗುವುದರಲ್ಲಿ ನಿರತರಾಗಿದ್ದಾರೆ.

ಈ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಮುಖಂಡರು ಸಂಸದೀಯ ಮಂಡಳಿ ಸಭೆ ನಡೆಸಿದ್ದು, ತ್ವರಿತಗತಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಸರತ್ತು ನಡೆಸಿದ್ದಾರೆ. ಈ ನಡುವೆಯೇ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ನಾಳೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆಂದು ಹೇಳಲಾಗಿದೆ.

ವಲಸಿಗರ ಭವಿಷ್ಯವೇನು?: ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದ 17 ಮಂದಿ ವಲಸಿಗರ ಭವಿಷ್ಯವೇನು ಎಂಬ ಪ್ರಶ್ನೆ ಉದ್ಬವಿಸಿದೆ. `ವಲಸಿಗ ಸಚಿವರೂ ನಮ್ಮ ಜೊತೆಗೆ ಇರಲಿದ್ದಾರೆ. ಈ ಸರಕಾರ ಅಧಿಕಾರಕ್ಕೆ ಬರಲು ನಮ್ಮೊಂದಿಗೆ ನಿಂತ ಆ ಎಲ್ಲರಿಗೂ ಮುಂದೆಯೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಲಿದ್ದಾರೆ' ಎಂದು ಖುದ್ದು ಯಡಿಯೂರಪ್ಪನವರೇ ಸ್ಪಷ್ಟಣೆ ನೀಡಿದ್ದಾರೆ. ಆದರೆ, ಈ ಕುರಿತು ವರಿಷ್ಟರು ಏನು ತೀರ್ಮಾನ ಮಾಡಿದ್ದಾರೆಂಬುದು ಸದ್ಯಕ್ಕೆ ಅನಿಶ್ಚಿತತೆಯಲ್ಲಿದೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ನೇತೃತ್ವದ ಸಚಿವ ಸಂಪುಟ ಅಸ್ತಿತ್ವ ಕಳೆದುಕೊಂಡಿದ್ದು, ಹೊಸ ಮುಖ್ಯಮಂತ್ರಿಯೊಂದಿಗೆ ಹೊಸ ಸಂಪುಟ ರಚನೆ ಮಾಡಬೇಕಿದೆ. ಹೀಗಾಗಿ ಯಾರು ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆಂಬುದು ತೀವ್ರ ಕುತೂಹಲ ಮೂಡಿಸಿದೆ. ಹೊಸ ಮುಖಗಳಿಗೆ ಅವಕಾಶ ನೀಡಿದರೆ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯೂ ಆವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News