ಪ್ರಶಾಂತ್ ಕಿಶೋರ್ ಅವರ I-PAC ತಂಡವನ್ನು ಹೋಟೆಲ್‍ನಲ್ಲಿ ದಿಗ್ಬಂಧನದಲ್ಲಿರಿಸಿದ ತ್ರಿಪುರಾ ಪೊಲೀಸರು

Update: 2021-07-27 09:59 GMT
Photo: Navbharattimes

ಅಗರ್ತಲಾ : ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಒಡೆತನದ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (I-PAC)ಗೆ ಸೇರಿದ 23 ಮಂದಿ ಸದಸ್ಯರ ತಂಡವನ್ನು ಅವರಿರುವ ತ್ರಿಪುರಾದ ಹೋಟೆಲ್‍ನ ಕೊಠಡಿಗಳಲ್ಲಿಯೇ ರವಿವಾರ ತಡರಾತ್ರಿಯಿಂದ ದಿಗ್ಬಂಧನದಲ್ಲಿರಿಸಲಾಗಿದೆ. ಕೋವಿಡ್ ನಿಯಮಾನುಸಾರ ಅವರನ್ನು ಅಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ರಾಜ್ಯದಲ್ಲಿನ ಆಡಳಿತದ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ವಿಶ್ಲೇಷಿಸುವ ಸಲುವಾಗಿ ಈ ತಂಡ ತ್ರಿಪುರಾಗೆ ಜುಲೈ 20ರಂದು ಆಗಮಿಸಿ ಸಮೀಕ್ಷೆಗಾಗಿ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ಕೊಟ್ಟಿತ್ತು.

ಆರೋಗ್ಯ ಅಧಿಕಾರಿಗಳೊಂದಿಗೆ ರವಿವಾರ ರಾತ್ರಿ ಪೊಲೀಸ್ ಅಧಿಕಾರಿಗಳ ತಂಡವೊಂದು ಅವರಿರುವ ಹೋಟೆಲ್‍ಗೆ ರವಿವಾರ ರಾತ್ರಿ ಆಗಮಿಸಿ ಅವರ ಭೇಟಿಯ ಉದ್ದೇಶವನ್ನು ಕೇಳಿದ್ದರು. ಅವರ ಬಳಿ ಆರ್‍ಟಿ-ಪಿಸಿಆರ್ ವರದಿಗಳಿವೇ ಎಂದು ಕೇಳಲಾಯಿತಲ್ಲದೆ ಆರೋಗ್ಯಾಧಿಕಾರಿಗಳು ಅನುಮತಿ ನೀಡುವ ತನಕ ಹೋಟೆಲ್ ಬಿಟ್ಟು ತೆರಳದಂತೆ ಸೂಚಿಸಲಾಗಿತ್ತು.

ಸಾಮಾನ್ಯ ಪೊಲೀಸ್ ತಪಾಸಣೆಯ ಭಾಗವಾಗಿ ತಂಡವನ್ನು ಹೋಟೆಲ್‍ನಲ್ಲಿರಿಸಿ ಪ್ರಶ್ನಿಸಲಾಗುತ್ತಿದೆ ಎಂದು ಪಶ್ಚಿಮ ತ್ರಿಪುರಾದ ಎಸ್‍ಪಿ ಮಣಿಕ್ ದಾಸ್ ಹೇಳಿದ್ದಾರೆ. 

"ಹೊರಗಿನ ರಾಜ್ಯದಿಂದ  ಸುಮಾರು 22 ಮಂದಿ ಆಗಮಿಸಿ ವುಡ್‍ಲ್ಯಾಂಡ್ ಪಾರ್ಕ್ ಎಂಬ ಹೋಟೆಲ್‍ನಲ್ಲಿ ತಂಗಿದ್ದಾರೆಂದು ತಿಳಿದು ಬಂತು. ಕೋವಿಡ್ ಸಾಂಕ್ರಾಮಿಕದ ಸಂದರ್ಭ ಅವರ ಭೇಟಿಯ ಉದ್ದೇಶವನ್ನು ಪ್ರಶ್ನಿಸಲಾಗಿದೆ. ಅವರು ರಾಜ್ಯದ ಹಲವು ಕಡೆಗಳಿಗೆ ಭೇಟಿ ನೀಡಿ ಜನರನ್ನು ಸಂದರ್ಶಿಸಿದ್ದಾರೆ. ನಿಯಮದಂತೆ ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ವರದಿ ಬರುವ ತನಕ ಅವರು ಹೊರಗೆ ಬರುವಂತಿಲ್ಲ. ಇಲ್ಲಿ ಬಂಧನದ ಪ್ರಶ್ನೆಯಿಲ್ಲ. ಅವರು ಹೊರರಾಜ್ಯದಿಂದ ಬಂದಿರುವುದರಿಂದ ಈ ಕ್ರಮ. ಅವರು ಸಂಶೋಧನೆಗಾಗಿ ಬಂದಿದ್ದಾಗಿ ಹೇಳಿದ್ದಾರೆ ಇದರ ಕುರಿತೂ ಪರಿಶೀಲಿಸಲಾಗುತ್ತಿದೆ" ಎಂದರು.

ತಂಡದ ಒಬ್ಬ ಸದಸ್ಯ ಪ್ರತಿಕ್ರಿಯಿಸಿ ತಾವೆಲ್ಲರೂ ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿಗಳೊಂದಿಗೆ ಆಗಮಿಸಿದ್ದರೂ ಕೊಠಡಿಯೊಳಗೆ ಇರಿಸಲಾಗಿದೆ ಹಾಗೂ ಬಲವಂತವಾಗಿ ಸೋಮವಾರ ಮತ್ತೆ ಪರೀಕ್ಷೆ ನಡೆಸಲಾಗಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಈ ರೀತಿ ಮಾಡಿದೆ, ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪಕ್ಷ I-PAC ತಂಡದ ಸೇವೆಯನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News