ಪ್ರವಾಹ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿಯ ಅಧಿಕಾರ ಹಸ್ತಾಂತರ ಎಷ್ಟು ಸರಿ: ಸಿದ್ದರಾಮಯ್ಯ ಪ್ರಶ್ನೆ

Update: 2021-07-27 12:25 GMT

ಬೆಳಗಾವಿ, ಜು.27: ರಾಜ್ಯದ ಹಲವೆಡೆ ಸಂಭವಿಸಿರುವ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ತುರ್ತು ನೆರವಿಗೆ ಬರಬೇಕಾದ ಸಂದರ್ಭದಲ್ಲಿಯೇ ಬಿಜೆಪಿ ವರಿಷ್ಟರು ಮುಖ್ಯಮಂತ್ರಿ ಹುದ್ದೆಯ ಹಸ್ತಾಂತರ ಕಾರ್ಯದಲ್ಲಿ ನಿರತರಾಗಿರುವುದು ಎಷ್ಟು ಸರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮುಂದುವರಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ವರಿಷ್ಟರು ಯಡಿಯೂರಪ್ಪರಿಂದ ಇನ್ನು ಕೆಲ ದಿನಗಳ ಬಳಿಕೆ ರಾಜೀನಾಮೆ ಪಡೆಯಬಹುದಿತ್ತು, ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಎದುರಾಗಿದೆ, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಮಂಡಲವೇ ಇಲ್ಲದ ಮೇಲೆ ಜನರ ಕಷ್ಟಗಳನ್ನು ಕೇಳೋರು ಯಾರು. ಬಿಜೆಪಿ ವರಿಷ್ಟರಿಗೆ ಜನರ ಜೀವಕ್ಕಿಂತ ಅಧಿಕಾರ ಹಸ್ತಾಂತರ ಮುಖ್ಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯರಂತಹ ನೂರು ಜನ ಬಂದರೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಯಡಿಯೂರಪ್ಪ ಅಹಂಕಾರದ ಮಾತನಾಡಿದ್ದಾರೆ, ಆದರೆ, ರಾಜ್ಯದಲ್ಲಿ ಈವರೆಗೆ ಒಮ್ಮೆಯಾದರೂ ಬಿಜೆಪಿ ಪಕ್ಷ ಸರಳ ಬಹುಮತ ಪಡೆದು ಸರಕಾರ ರಚಿಸಿದೆಯೇ. ಆಪರೇಷನ್ ಕಮಲದ ಮೂಲಕ ಸರಕಾರ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್.ವಿ.ದರ್ಶನ್ ಹಾಜರಿದ್ದು, ಪ್ರವಾಹ ಪರಿಸ್ಥಿತಿ ಕುರಿತು ವಿವರಿಸಿದರು. ಈ ವೇಳೆ ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್, ಗಣೇಶ ಹುಕ್ಕೇರಿ, ಮುಖಂಡರಾದ ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಹಾಜರಿದ್ದರು.


ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಯಡಿಯೂರಪ್ಪ ಶಾಸಕರ ಬೆಂಬಲದ ಮೇಲೆ ಮುಖ್ಯಮಂತ್ರಿಯಾದವರು. ಅವರನ್ನು ಇದ್ದಕ್ಕಿದ್ದಂತೆ ಕಿತ್ತು ಹಾಕಿದ್ದಾರೆ, ಮುಂದಿನ ಮುಖ್ಯಮಂತ್ರಿ ಆಯ್ಕೆಯ ಹಕ್ಕು ಕೂಡ ಶಾಸಕರಿಗಿಲ್ಲ. ಬಿಜೆಪಿ ಶಾಸಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಹೈಕಮಾಂಡ್ ಮಾತಿಗೆ ಸುಮ್ಮನೆ ತಲೆಯಾಡಿಸಬೇಕು. ಅವರು ಯಾರನ್ನು ಬೇಕಾದರೂ ಅಧಿಕಾರದಿಂದ ಕಿತ್ತುಹಾಕಬಹುದು, ಇಷ್ಟಬಂದವರನ್ನು ಕುರ್ಚಿಯಲ್ಲಿ ಕೂರಿಸಬಹುದು.

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News