2020ರ ನೆರೆ ಪರಿಹಾರಕ್ಕೆ ಕೇಂದ್ರದಿಂದ ರಾಜ್ಯಕ್ಕೆ 629 ಕೋಟಿ ರೂ. ಬಿಡುಗಡೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2021-07-27 12:40 GMT
ಶೋಭಾ ಕರಂದ್ಲಾಜೆ

ಉಡುಪಿ, ಜು.27: ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಲ್ಲಿ ಕಳೆದ ವರ್ಷ (2020) ಸಂಭವಿಸಿದ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಕೇಂದ್ರ ಸರಕಾರ ಕರ್ನಾಟಕಕ್ಕೆ 629.03 ಕೋಟಿ ಹಾಗೂ ಮಹಾರಾಷ್ಟ್ರಕ್ಕೆ 701 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳ ಹಾನಿ ಹಾಗೂ ಆಸ್ತಿಪಾಸ್ತಿಗಳ ನಷ್ಟವಾಗಿದ್ದು, ಅದಕ್ಕೆ ಎಸ್‌ಡಿಆರ್‌ಎಫ್ ಮಾನದಂಡ ಗಳ ಅಡಿಯಲ್ಲಿ ರಾಜ್ಯಗಳಿಗೆ ನೆರೆ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದವರು ಹೇಳಿದ್ದಾರೆ.

ಕಳೆದ ವರ್ಷ ರಾಜಸ್ಥಾನದಲ್ಲೂ ಅನಾವೃಷ್ಟಿಯಿಂದ ಕೃಷಿ ಸಮುದಾಯಕ್ಕೆ ಅಪಾರ ಬೆಳೆ ನಷ್ಟ ಉಂಟಾಗಿದ್ದು, ಕೇಂದ್ರ ಸರಕಾರ ಈ ಬೆಳೆ ನಷ್ಟಕ್ಕೆ ನೆರವಿನ ರೂಪದಲ್ಲಿ 113.69 ಕೋಟಿ ರೂ.ಗಳ ನೆರವನ್ನು ನೀಡಿದೆ ಎಂದೂ ಸಚಿವೆ ತಿಳಿಸಿದ್ದಾರೆ.

2020-21ನೇ ಸಾಲಿನ ಖಾರಿಫ್ ಮತ್ತು ರಬಿಯಲ್ಲಾದ ಬೆಳೆ ನಷ್ಟಕ್ಕೆ ಕೇಂದ್ರ ಸರಕಾರ ಒಟ್ಟು 750.12 ಕೋಟಿ ರೂ. ಬೆಳೆವಿಮೆ ಪರಿಹಾರವನ್ನು ನೀಡಲಾಗಿದೆ. ಮಹಾರಾಷ್ಟ್ರದ 11.43 ಲಕ್ಷ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಇದರ ಲಾಭವನ್ನು ಪಡೆಯಲಿದ್ದಾರೆ. ಇದರಡಿಯಲ್ಲಿ ಮಹಾರಾಷ್ಟ್ರದ ಒಟ್ಟು 67.96 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಬೆಳೆವಿಮೆಗೆ ಒಳಪಡಿಸಲಾಗಿತ್ತು ಎಂದು ಸಚಿವೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News