ಹವಾಮಾನ ಬದಲಾವಣೆ, ಸಂಘರ್ಷದಿಂದ ಜಾಗತಿಕ ಹಸಿವಿನ ಸಮಸ್ಯೆ ಉಲ್ಬಣ: ಗುಟೆರಸ್

Update: 2021-07-27 16:29 GMT
photo: twitter@antonioguterres

ವಿಶ್ವಸಂಸ್ಥೆ, ಜು.27: ಹವಾಮಾನ ಬದಲಾವಣೆ ಹಾಗೂ ಸಂಘರ್ಷವು ಜಾಗತಿಕ ಹಸಿವಿನ ಸಮಸ್ಯೆ ಉಲ್ಬಣಗೊಳ್ಳಲು ಪ್ರಧಾನ ಕಾರಣವಾಗಿದ್ದು 2019ಕ್ಕೆ ಹೋಲಿಸಿದರೆ ಕಳೆದ ವರ್ಷ 161 ಮಿಲಿಯನ್ನಷ್ಟು ಅಧಿಕ ಜನತೆ ಹಸಿವಿನ ದವಡೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಹವಾಮಾನ ಬದಲಾವಣೆ ಮತ್ತು ಸಂಘರ್ಷವು ಬಡತನ, ಆದಾಯ ಅಸಮಾನತೆ ಮತ್ತು ಆಹಾರಧಾನ್ಯಗಳ ಬೆಲೆಯ ಮೇಲೆ ಪರಿಣಾಮ ಬೀರುವ ಜೊತೆಗೆ ಇವುಗಳ ಚಾಲಕ ಶಕ್ತಿಯೂ ಆಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಎಚ್ಚರಿಸಿದ್ದಾರೆ. 

ರೋಮ್ನಲ್ಲಿ ನಡೆದ ಸಭೆಯೊಂದರಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು, ಜಾಗತಿಕ ಆಹಾರ ವ್ಯವಸ್ಥೆಯು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೂರನೇ ಒಂದಂಶಕ್ಕೆ ಕಾರಣವಾಗಿದೆ. ಈ ವ್ಯವಸ್ಥೆಯು ಸುಮಾರು 80% ಜೈವಿಕ ವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿದೆ. ಬಡತನ, ಆದಾಯದ ಅಸಮಾನತೆ ಮತ್ತು ಆಹಾರ ವಸ್ತುಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಸುಮಾರು 3 ಬಿಲಿಯನ್ ಜನತೆ ಆರೋಗ್ಯಕರ ಆಹಾರದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ ಎಂದರು. ನ್ಯೂಯಾರ್ಕ್ ನಲ್ಲಿ ಸೆಪ್ಟಂಬರ್ ನಲ್ಲಿ ಆಯೋಜಿಸಿರುವ ವಿಶ್ವಸಂಸ್ಥೆ ಆಹಾರ ವ್ಯವಸ್ಥೆಯ ಸಮ್ಮೇಳನದ ಸಿದ್ಧತೆಗೆ ನೆರವಾಗಲು ಈ ಸಭೆ ನಡೆಯುತ್ತಿದೆ. 

ಪೂರ್ವಸಿದ್ಧತಾ ಸಭೆಯು ಈ ದಶಕದಲ್ಲಿ ರೂಪಿಸಬೇಕಾದ ಚಟುವಟಿಕೆಗಳ ರೂಪುರೇಷೆ ನಿರ್ಧರಿಸುವುದರ ಜೊತೆಗೆ, ಕೋವಿಡ್ ಸೋಂಕಿನಿಂದ ಸಮಾನ ಮತ್ತು ಸುಸ್ಥಿರ ಚೇತರಿಕೆಗೆ ಪೂಕವಾಗಲಿದೆ ಎಂದವರು ಹೇಳಿದ್ದಾರೆ.

  ನೂರಾರು ಮಿಲಿಯನ್ ಜನರು ಬಡತನ ಮತ್ತು ಹಸಿವಿನ ವ್ಯಾಪ್ತಿಗೆ ಸೇರಲು ಕಾರಣವಾಗಿರುವ ಆಹಾರ ವ್ಯವಸ್ಥೆಯ ವೈಫಲ್ಯದ ಬಗ್ಗೆ ಗಮನ ಹರಿಸುವಂತೆ ಕೃಷಿ ಅಭಿವೃದ್ಧಿಗಾಗಿನ ಅಂತರಾಷ್ಟ್ರೀಯ ನಿಧಿ(ಐಎಫ್ಎಡಿ) ಕರೆ ನೀಡಿದೆ. ಆರೋಗ್ಯಕರ ಆಹಾರ ಎಲ್ಲರಿಗೂ ಲಭ್ಯವಾಗುವಂತೆ ಖಾತರಿ ಪಡಿಸಲು ಆಹಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಅಗತ್ಯವಿದೆ. ಆಹಾರ ಉತ್ಪಾದನೆ ಪ್ರಕ್ರಿಯೆ ಪರಿಸರ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ರೀತಿಯಲ್ಲಿರಬೇಕು ಮತ್ತು ಆಹಾರ ಉತ್ಪಾದಿಸುವವರಿಗೆ ಅವರ ಕೆಲಸಕ್ಕೆ ಯೋಗ್ಯ ಪ್ರತಿಫಲ ದೊರಕುವಂತಾಗಬೇಕು. ಗ್ರಾಮೀಣ ಜನತೆಯ ಅಗತ್ಯಗಳಿಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ ಎಂದು ಐಎಫ್ಎಡಿ ಹೇಳಿದೆ.

 100 ಮಿಲಿಯನ್ ಜನರನ್ನು ತೀವ್ರ ಅಪೌಷ್ಟಿಕತೆಯ ವ್ಯಾಪ್ತಿಯಿಂದ ಹೊರತರಲು 2030ರವರೆಗೆ ಪ್ರತೀ ವರ್ಷ ಹೆಚ್ಚುವರಿ 14 ಬಿಲಿಯನ್ ಡಾಲರ್ ನೆರವಿನ ಅಗತ್ಯವಿದೆ ಮತ್ತು 2030ರ ವೇಳೆ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ವಿಶ್ವಸಂಸ್ಥೆಯ ಗುರಿ ತಲುಪಬೇಕಿದ್ದರೆ ಈ ಮೊತ್ತದ ಮೂರುಪಟ್ಟು ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News