ಗಡಿಯಲ್ಲಿ ಹಿಂಸಾಚಾರ: ಸಭೆಗೆ ಹಾಜರಾಗಲು ಅಸ್ಸಾಂ-ಮಿಝೋರಾಂನ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಕೇಂದ್ರದ ಕರೆ

Update: 2021-07-27 18:37 GMT

ಹೊಸದಿಲ್ಲಿ, ಜು. 27: ಅಸ್ಸಾಂನ ಐವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಲು ಕಾರಣವಾದ ಗಡಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಸ್ಸಾಂ ಹಾಗೂ ಮಿರೆರಾಂನ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗಳ ಸಭೆ ಕರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಇದ್ದಕ್ಕಿದ್ದಂತೆ ಹಿಂಸಾಚಾರ ಉದ್ಭವಿಸಿದ ಬಗ್ಗೆ ಚರ್ಚೆ ನಡೆಸಲು ಏರ್ಪಡಿಸಲಾದ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳ ಸಭೆಯಲ್ಲಿ ಶಾಂತಿ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಇದರಿಂದ ಉಭಯ ರಾಜ್ಯಗಳ ಗಡಿಯಲ್ಲಿ ಹಿಂಸಾಚಾರ ಮರುಕಳಿಸದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಹಾಗೂ ಮಿಜೋರಾಂನೊಂದಿಗೆ ಕೇಂದ್ರ ಸರಕಾರ ನಿರಂತರ ಸಂಪರ್ಕದಲ್ಲಿದೆ. ಅಲ್ಲದೆ, ಅಲ್ಲಿ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸುತ್ತಿದೆ. 

ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಿಆರ್ಪಿಎಫ್ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಭಯ ರಾಜ್ಯಗಳ ಗಡಿಯಲ್ಲಿ ಅಸ್ಸಾಂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ಮಿರೆರಾಂ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಓರ್ವ ನಾಗರಿಕನೊಂದಿಗೆ ಅಸ್ಸಾಂನ ಐವರು ಪೊಲೀಸರು ಸಾವನ್ನಪ್ಪಿದ್ದರು. ಪೊಲೀಸ್ ಅಧೀಕ್ಷಕರು ಸೇರಿದಂತೆ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News