ಸೇನೆಗೆ ದುಬಾಷಿಗಳಾಗಿದ್ದ ಅಪಘಾನ್ ಪ್ರಜೆಗಳಿಗೆ ಆರ್ಥಿಕ ನೆರವು: ಝೆಕ್ ಗಣರಾಜ್ಯ ಘೋಷಣೆ

Update: 2021-07-30 17:01 GMT

ಪ್ರೇಗ್, ಜು.30: ಅಪಘಾನಿಸ್ತಾನದಲ್ಲಿ ಝೆಕ್ ಸೇನೆಯನ್ನು ನಿಯೋಜಿಸಿದ್ದ ಸಂದರ್ಭ ದುಬಾಷಿಗಳಾಗಿ ಕಾರ್ಯನಿರ್ವಹಿಸಿದ್ದ ಅಪಘಾನ್ ಪ್ರಜೆಗಳಿಗೆ ಆರ್ಥಿಕ ನೆರವು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಝೆಕ್ ಗಣರಾಜ್ಯದ ಸರಕಾರ ಹೇಳಿದೆ.

ಸುರಕ್ಷತೆಯ ನಿಟ್ಟಿನಲ್ಲಿ ಈ ಬಗ್ಗೆ ಹೆಚ್ಚಿನ ವಿವರ ಒದಗಿಸಲಾಗದು. ಅಪಘಾನ್ನಲ್ಲಿ 2002ರಿಂದ ಝೆಕ್ ಸೇನೆ ಇದ್ದಾಗ ಸುಮಾರು 30 ಸ್ಥಳೀಯರ ಸೇವೆ ಪಡೆಯಲಾಗಿದ್ದು ಇವರಲ್ಲಿ ಹೆಚ್ಚಿನವರು ದುಬಾಷಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಇವರ ಕುಟುಂಬದವರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಝೆಕ್ ರಕ್ಷಣಾ ಸಚಿವ ಲುಬೊಮಿರ್ ಮೆಟ್ನರ್ ಹೇಳಿದ್ದಾರೆ.

ಅಪಘಾನಿಸ್ತಾನ ಸರಕಾರಕ್ಕೆ ನೆರವಾಗಲು 2002ರಿಂದ ಅಮೆರಿಕ ಸಹಿತ ಹಲವು ದೇಶಗಳ ಸೇನೆಯನ್ನು ನಿಯೋಜಿಸಲಾಗಿತ್ತು. ಇವರಿಗೆ ದುಬಾಷಿಗಳಾಗಿ(ಸ್ಥಳೀಯ ಭಾಷೆ ಹಾಗೂ ವಿದೇಶಿ ಭಾಷೆ ಬಲ್ಲವರು) ಹಲವು ಸ್ಥಳೀಯರು ಕೆಲಸ ಮಾಡಿದ್ದರು. ಜೊತೆಗೆ ರಾಯಭಾರಿ ಕಚೇರಿಯಲ್ಲಿ ಇತರ ಕೆಲಸಗಳಿಗೂ ಸ್ಥಳೀಯರ ಸೇವೆ ಬಳಸಿಕೊಳ್ಳಲಾಗಿತ್ತು. ಇದೀಗ ಅಲ್ಲಿಂದ ವಿದೇಶಿ ಸೇನೆ ವಾಪಸಾತಿ ಆರಂಭವಾಗುತ್ತಿದ್ದಂತೆಯೇ, ಇವರ ವಿರುದ್ಧ ತಾಲಿಬಾನ್ ಗಳು ಪ್ರತೀಕಾರ ತೀರಿಸಿಕೊಳ್ಳುವ ಭೀತಿ ತಲೆದೋರಿರುವುದರಿಂದ ಹಲವರು ದೇಶ ಬಿಟ್ಟು ತೆರಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಸುಮಾರು 20,000 ಅಪಘಾನ್ ಪ್ರಜೆಗಳು ಅಮೆರಿಕದ ವಿಶೇಷ ವಲಸೆ ವೀಸಾ ಯೋಜನೆಯಡಿ ಆ ದೇಶಕ್ಕೆ ತೆರಳಲು ಅರ್ಜಿ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News