ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ ಹಾಗಾಗಿಯೇ ಭೂ ಒತ್ತುವರಿಯಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದರು: ಶಾಸಕ ಸಾ.ರಾ.ಮಹೇಶ್

Update: 2021-07-30 18:50 GMT

ಮೈಸೂರು,ಜು.30: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಾಗಾಗಿಯೇ ಅವರು ಭೂ ಒತ್ತುವರಿಯಾಗಿದೆ ಎಂದು ಸುಳ್ಳು ಆರೋಪಗಳನ್ನು ಮಾಡಿದರು. ಇವರು ಸಿಂಗಂ ಅಲ್ಲ, ಮಂಗಂ ಎಂದು ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂಕೋರ್ಟ್‍ವರೆಗೂ ಹೋದವರು ಮೂರನೇ ದಿನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಮೋದಾದೇವಿ ಅವರ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯುತ್ತಾ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಫೋಟೋ ತೋರಿಸಿ ವಾಗ್ದಾಳಿ ನಡೆಸಿದರು.

ಸರ್ವೇ ನಂ.4 ವ್ಯಾಜ್ಯದಲ್ಲಿ ಡಿಸಿ ವಾದಿ ಮತ್ತು ರಾಜವಂಶಸ್ಥರು ಪ್ರತಿವಾದಿ. ಆ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಅಡ್ಮಿಟ್ ಆಗಲಿಲ್ಲ. ಕೇಸ್ ವಜಾಗೊಂಡ ಮೂರನೇ ದಿನದಲ್ಲಿ ವಾದಿ, ಪ್ರತಿವಾದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಫೋಟೋ ತೆಗೆಸಿಕೊಳ್ಳುವ ನಿಮಗೆ ರಾಜವಂಶದವರ ಇತಿಹಾಸ ಗೊತ್ತಿರಲಿಲ್ಲವೇ ಎಂದು ರೋಹಿಣಿ ಅವರನ್ನು ಪ್ರಶ್ನಿಸಿದರು.

ಒಂದು ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕಾಗಿ ನಿಮ್ಮ ಮೇಲೆ ಕ್ರಮ ಆಗಬೇಕು. ರಾಜಮನೆತನ ಮತ್ತು ಅವರ ಕೊಡುಗೆ ಬಗ್ಗೆ ಈ ರೋಹಿಣಿ ಅವರು ಪುಸ್ತಕ ಓದಿಕೊಂಡಿರಬೇಕು. ರಾಜಮನೆತನ ಏನು, ಮೈಸೂರು ಜನ ಏನು ಎಂದು ಅವರಿಗೆ ಈಗ ಗೊತ್ತಾದಂತಿದೆ. ರಾಜಮನೆತನದವರ ಮೇಲೆ ಅಡ್ಮಿಟ್ ಆಗದ ಕೇಸ್ ಅನ್ನು ಹಾಕಿದ್ದಾರೆ. ಇದಕ್ಕೆ 24 ಲಕ್ಷ ರೂ. ಹಣವನ್ನು ವ್ಯರ್ಥ ಮಾಡಿದರು. ಇದು ಮುಡಾ ಸಿಬ್ಬಂದಿ ನಿವೃತ್ತರಾದ ನಂತರ ಅವರಿಗೆ ಕೊಡುವ ಪಿಂಚಣಿ ಹಣವನ್ನು ಯಾರ ಅನುಮತಿ ಪಡೆಯದೆಯೇ ವ್ಯರ್ಥ ಮಾಡಿದ್ದಾರೆ ಎಂದು ಹರಿಹಾಯ್ದರು.

ಭೂ ಹಗರಣದಿಂದ ನನ್ನ ವರ್ಗಾವಣೆ ಮಾಡಿದರು ಎಂಬ ರೋಹಿಣಿ ಸಿಂಧೂರಿ ಅವರು ಆರೋಪ ಸುಳ್ಳು. ಅವರು ಯಾವುದೇ ಭೂಮಿ ಉಳಿಸುವ ಕೆಲಸ ಮಾಡಿಲ್ಲ. ದಲಿತ ಸಮುದಾಯದ ಶರತ್ ಅವರನ್ನು 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದರು. ವಾಲ್ಮೀಕಿ ಜಯಂತಿಯಂದು ನಾಗರಹೊಳೆಯ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದರು. ಕೋವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕ ನೀಡಿದ್ದರು. ಸಾ.ರಾ.ಚೌಲ್ಟ್ರಿ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣ ಮಾಡಿದೆ ಅಂತ ಆರೋಪ ಮಾಡಿದ್ದರು. ಉಲ್ಲಂಘನೆ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳಿಂದಲೇ ವರದಿ ಬಂದಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News