ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ: ಕೆ.ಎಸ್.ಈಶ್ವರಪ್ಪ

Update: 2021-07-30 18:53 GMT

ಮೈಸೂರು,ಜು.30: ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,  ನೂತನ ಸಚಿವ ಸಂಪುಟದಲ್ಲಿ ಇರಬೇಕಾ ಬೇಡವಾ ಎಂಬುದು ನಾನು ತೆಗೆದುಕೊಳ್ಳುವ ನಿರ್ಧಾರವಲ್ಲ. ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ.  ಸಿಎಂ, ರಾಜ್ಯಧ್ಯಕ್ಷ ಹಾಗೂ ಕೇಂದ್ರ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಜಗದೀಶ್ ಶೆಟ್ಟರ್ ಅವರು ಹಿರಿಯರಾಗಿದ್ದಾರೆ. ತಮ್ಮ ಜೂನಿಯರ್ ಕೆಳಗೆ ಸಂಪುಟದಲ್ಲಿ ಇರುವುದಿಲ್ಲ ಎನ್ನುವ ತೀರ್ಮಾನ ಮಾಡಿದ್ದಾರೆ. ಇದಕ್ಕೂ ಕಟೀಲ್ ಅವರದ್ದು ಎನ್ನುವ ಆಡಿಯೋ ಕ್ಕೂ ಸಂಬಂಧ ಇಲ್ಲ ಎಂದರು.

ನನ್ನ ಪರವಾಗಿ ಸ್ವಾಮೀಜಿಗಳು ಸ್ನೇಹಿತರು ನನ್ನ ಮಾತನಾಡುತ್ತಾರೆ ಇದು ಖುಷಿ. ನಾನು ಸಚಿವನಾಗಬೇಕು, ಡಿಸಿಎಂ, ಸಿಎಂ ಆಗಬೇಕು ಅಂತ ಅಪೇಕ್ಷೆ ಪಡುತ್ತಾರೆ. ನಾನು ರಾಜಕಾರಣಿ, ರಾಜಕಾರಣಿಗೆ ನಿರೀಕ್ಷೆ ಇರುತ್ತೆ. ಆದರೆ ಕೇಂದ್ರ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ತಿಳಿಸಿದರು. 

ಇದಕ್ಕೂ ಮೊದಲು ಆಷಾಢ ಶುಕ್ರವಾರ ಮತ್ತು ಶ್ರೀಚಾಮುಂಡೇಶ್ವರಿ ತಾಯಿ ವರ್ಧಂತಿ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ನಂತರ ಖಾಸಗಿ ಹೋಟೆಲ್‍ಗೆ ಆಗಮಿಸಿದ ಅವರನ್ನು ಚಲನಚಿತ್ರ ನಟ ಶಿವರಾಜ್ ಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಇಬ್ಬರು ಒಟ್ಟಿಗೆ ಉಪಹಾರ ಸೇವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News