ಬಿಜೆಪಿಯಲ್ಲಿ ಬೆಳೆದ ಬಿಎಸ್‌ವೈಗೆ ಕೇಂದ್ರದಿಂದ ಅನುದಾನ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿಗೆ ಆಗುತ್ತಾ?: ಸಿದ್ದರಾಮಯ್ಯ

Update: 2021-07-31 06:55 GMT

ಮೈಸೂರು,ಜು.31: ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಸ್.ಯಡಿಯೂರಪ್ಪನವರಿಗೇ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರಲು ಆಗಲಿಲ್ಲ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗುತ್ತದೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮೈಸೂರು ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು ಶನಿವಾರ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಬಿಜೆಪಿ ಜೊತೆಯಲ್ಲೇ ಬೆಳೆದ ಬಿ.ಎಸ್.ಯಡಿಯೂರಪ್ಪರಿಗೆ ಕೆಂದ್ರದಿಂದ ಅನುದಾನ ತರಲು ಆಗಲಿಲ್ಲ, ಇನ್ನು ಜನತಾ ದಳದಿಂದ ಬಂದ ಬಸವರಾಜ ಬೊಮ್ಮಾಯಿ ತರುತ್ತಾರ? ಬಿಜೆಪಿಯಲ್ಲೆ ಇದ್ದವರ ಮಾತನ್ನೇ ಕೇಂದ್ರದ ನಾಯಕರುಗಳು ಕೇಳಲಿಲ್ಲ, ಇನ್ನು ಜನತಾ ದಳದಿಂದ ಬಂದವರ ಮಾತನ್ನು ಕೇಳುತ್ತಾರ ಎಂದು ನುಡಿದರು.

ಮುಖ್ಯಮಂತ್ರಿ ಜೊತೆಯಲ್ಲೇ ಸಚಿವ ಸಂಪುಟ ರಚನೆ ಮಾಡಬೇಕಿತ್ತು, ಕೊರೋನ ಹಿನ್ನಲೆಯಲ್ಲಿ ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಕೊರೋನ ಮೂರನೇ ಅಲೆ ಭೀತಿ ಎದುರಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಇಲ್ಲದಿದ್ದರೆ ರಾಜ್ಯ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಲಿದೆ. ಸಚಿವರು ಇಲ್ಲದಿದ್ದರೂ ಪರವಾಗಿಲ್ಲ ಅಧಿಕಾರಗಳ ಮೂಲಕ ನಿರ್ವಹಣೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

 ಸರ್ಕಾರದ ಏಕ ವ್ಯಕ್ತಿಯಿಂದ ಕೊರೋನ ನಿಯಂತ್ರಣ ಸಾಧ್ಯವಿಲ್ಲ, ಅದಕ್ಕಾಗಿಯೇ ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಬೇಕು, ಕೇರಳ, ಮಹಾರಾಷ್ಟ್ರದಿಂದ ಬರುವವರನ್ನು ತಡೆಯಬೇಕು. ಕೇರಳದಲ್ಲಿ ಕೊರೋನ ಸೋಂಕು ಹೆಚ್ಚಾಗಿದೆ. ಕಳೆದ ಬಾರಿ ನೆರೆ ಪರಿಹಾರವನ್ನೇ ಇನ್ನೂ ಸರ್ಕಾರ ನೀಡಿಲ್ಲ, ಮನೆ ಬಿದ್ದವರಿಗೆ 10 ಸಾವಿರ ರೂ. ಪರಿಹಾರ ಸಹ ನೀಡಿಲ್ಲ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News