ತಮಿಳುನಾಡಿನ ವಿರೋಧ ಲೆಕ್ಕಿಸದೆ ಮೇಕೆದಾಟು ಯೋಜನೆ ಜಾರಿಗೊಳಿಸಿಯೇ ತೀರುತ್ತೇವೆ: ಸಿಎಂ ಬೊಮ್ಮಾಯಿ

Update: 2021-07-31 13:08 GMT

ಹೊಸದಿಲ್ಲಿ : ತಮಿಳುನಾಡಿನ ವಿರೋಧವನ್ನು ಲೆಕ್ಕಿಸದೆ ಕೇಂದ್ರದ ಅನುಮತಿ ಪಡೆದು ಮೇಕೆದಾಟು ಕುಡಿಯುವ ನೀರು ಯೋಜನೆಯನ್ನು ರಾಜ್ಯ ಜಾರಿಗೊಳಿಸಲಿದೆ ಎಂದು ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಮೇಕೆದಾಟು ಯೋಜನೆಯನ್ನು ಮುಂದುವರಿಸಲು ಕರ್ನಾಟಕ ಕೈಗೊಂಡಿರುವ ತೀರ್ಮಾನದ ವಿರುದ್ಧ ತಮ್ಮ ಪಕ್ಷ  ಪ್ರತಿಭಟನೆ ನಡೆಸಲಿದೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಹೇಳಿಕೆ ಮಹತ್ವ ಪಡೆದಿದೆ.

"ಅವರು (ಅಣ್ಣಾಮಲೈ) ತಮ್ಮ ಕೆಲಸ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಅಣ್ಣಾಮಲೈ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ ಯೋಚಿಸುವುದು ನನ್ನ ಕೆಲಸವಲ್ಲ,'' ಎಂದು ಬೊಮ್ಮಾಯಿ ಹೇಳಿದ್ದಾರೆ.

"ಕಾವೇರಿ ನದಿ ನೀರಿನ ಮೇಲೆ ಕರ್ನಾಟಕಕ್ಕೆ ಎಲ್ಲಾ ಹಕ್ಕುಗಳಿವೆ ಹಾಗೂ ರಾಜ್ಯ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿಯೇ ತೀರುತ್ತದೆ,'' ಎಂದು ಅವರು ಹೇಳಿದರು.

"ರಾಜ್ಯ ಸರಕಾರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ ಹಾಗೂ ಅದನ್ನು ಕೇಂದ್ರದ ಒಪ್ಪಿಗೆಗಾಗಿ ಕಳುಹಿಸಲಿದೆ. ಅದಕ್ಕೆ ನಾವು ಅನುಮೋದನೆ ಪಡೆಯುತ್ತೇವೆ. ಯಾರು ಬೇಕಾದರೂ ಉಪವಾಸ ಮಾಡಲಿ ಅಥವಾ ಊಟ ಮಾಡಲಿ,'' ಎಂದು ಅವರು ಪರೋಕ್ಷವಾಗಿ ಅಣ್ಣಾಮಲೈ ಅವರಿಗೆ ತಿರುಗೇಟು ನೀಡಿದ್ದಾರೆ.

ಅಣ್ಣಾಮಲೈ ನೇತೃತ್ವದಲ್ಲಿ ತಮಿಳುನಾಡು ಬಿಜೆಪಿ ಘಟಕ ಕರ್ನಾಟಕದ ನಿರ್ಧಾರವನ್ನು ವಿರೋಧಿಸಿ ಆಗಸ್ಟ್ 5ರಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News