ಉಪಚುನಾವಣೆ ಅಖಾಡಕ್ಕಿಳಿಯಲು ಬಿ.ವೈ. ವಿಜಯೇಂದ್ರ ಸಿದ್ಧತೆ?

Update: 2021-07-31 13:16 GMT

ಬೆಂಗಳೂರು, ಜು. 31: ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪರ ಆಪ್ತ ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಶಾಸಕ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಪರಮಾಪ್ತರೆಲ್ಲ ಸೇರಿ ವಿಜಯೇಂದ್ರ ಅವರನ್ನು ಚೊಚ್ಚಲ ಚುನಾವಣೆಯಲ್ಲಿ ಕಣಕ್ಕಿಳಿಸಲು ತಯಾರಿ ಆರಂಭಿಸಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ವಿಜಯೇಂದ್ರ ಹೆಸರು ಕೇಳಿ ಬಂದಿತ್ತು. ಆದರೆ, ಚುನಾವಣಾ ಕಣದಿಂದ ದೂರ ಉಳಿದು ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯನಿರ್ವಹಿಸಿದ್ದರು. ಕೆಆರ್ ಪೇಟೆ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ವಿಜಯೇಂದ್ರ ಶ್ರಮಿಸಿದ್ದರು.

ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಹಾಗೂ ಉದಾಸಿ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆ ನಡೆಯಬೇಕಿದೆ. ಹೀಗಾಗಿ ಬಿಎಸ್‍ವೈ ಆಪ್ತರು ವಿಜಯೇಂದ್ರ ವಿಧಾನಸೌಧ ಪ್ರವೇಶಕ್ಕೆ ಉಪಚುನಾವಣೆ ಅಖಾಡಕ್ಕಿಳಿಸಲು ಮುಂದಾಗಿದ್ದಾರೆಂದು ಗೊತ್ತಾಗಿದೆ. ವಿಜಯೇಂದ್ರ ಶಾಸಕರಾದರೆ ಸದನದ ಒಳಗೆ ಮತ್ತು ಹೊರಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಸರಕಾರದಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಭವಿಷ್ಯದಲ್ಲಿ ಅವರಿಗೆ ಬಲವಾದ ಆಧಾರ ಒದಗಿಸಿದಂತಾಗುತ್ತದೆ ಎಂಬ ಅಭಿಪ್ರಾಯವಿದೆ.

ಸಿ.ಎಂ.ಉದಾಸಿ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಉಪಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜು ಕಲ್ಕೋಟಿ ಹೇಳಿದ್ದಾರೆ. ವಿಜಯೇಂದ್ರ ಅವರ ಹೆಸರು ಇಲ್ಲಿಯವರೆಗೆ ಪ್ರಸ್ತಾಪವಾಗಿಲ್ಲ. ಬಿಜೆಪಿ ಟಿಕೆಟ್‍ನಲ್ಲಿ ಯಾರು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಅವರು ಗೆಲ್ಲುತ್ತಾರೆ. ಉಪಚುನಾವಣೆ ಸಂಬಂಧ ಪಕ್ಷದೊಳಗೆ ಚರ್ಚೆಗಳು ಆರಂಭವಾಗಬೇಕಿದೆ, ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News