ನೂತನ ಸಿಎಂ ಬೊಮ್ಮಾಯಿ ಬಗ್ಗೆ ದೊಡ್ಡ ನಿರೀಕ್ಷೆ ಇಲ್ಲ: ಎಚ್.ಡಿ. ಕುಮಾರಸ್ವಾಮಿ

Update: 2021-07-31 14:01 GMT

ಬೆಂಗಳೂರು, ಜು. 31: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೆರಳಿನಲ್ಲೇ ಇದ್ದಾರೆ. ಇವರ ಬಗ್ಗೆ ದೊಡ್ಡ ನಿರೀಕ್ಷೆ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನೆಲಮಂಗಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿಯೂ ಜನತಾ ಪರಿವಾರದ ಸಿಎಂ, ಬಿಜೆಪಿಯಲ್ಲೂ ಜನತಾ ಪರಿವಾರದ ಮುಖ್ಯಮಂತ್ರಿ. ಇವರಿಬ್ಬರ ಬೆಂಬಲದಿಂದ ನಾನೂ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎರಡು ವರ್ಷಗಳಿಂದ ಸಾಮಾನ್ಯ ಜನರು ಸಿಎಂ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ನಾನು ಸಿಎಂ ಆಗಿದ್ದ ವೇಳೆ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ಸಮಸ್ಯೆ ಕೇಳುತ್ತಿದ್ದೆ ಎಂದು ನೆನಪು ಮಾಡಿಕೊಂಡರು.

ಅರವಿಂದ್ ಬೆಲ್ಲದ್ ಮುಖ್ಯಮಂತ್ರಿಯಾಗಿ ಆಯ್ಕೆ ಆಗುತ್ತೇನೆಂಬ ನಿರೀಕ್ಷೆಯಲ್ಲಿ ಇದ್ದರು. ಎರಡು ತಿಂಗಳಲ್ಲಿ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರಗಳ ಫೈಲ್‍ಗಳನ್ನು ತರಿಸಿಕೊಂಡಿದ್ದರಂತೆ. ಇನ್ನೇನು ಸಿಎಂ ಆಗಿಯೇ ಬಿಡುತ್ತೇನೆಂದು ಬೆಲ್ಲದ್ ಅವರು ಈ ರೀತಿ ಮಾಡಿದರಂತೆ ಎಂಬ ವಿಷಯ ಯಾವುದೋ ಮಾಧ್ಯಮದಲ್ಲಿ ನೋಡಿದೆ. ಬಿಜೆಪಿಯಲ್ಲಿ ಅವರವರ ಮಧ್ಯೆಯೇ ಸಮನ್ವಯತೆ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

ಕೋವಿಡ್ ಏರಿಕೆ: ಕೊರೋನ ಎರಡನೇ ಅಲೆ ಸಂದರ್ಭದಲ್ಲಿ ನಾನೇ ಮೊದಲಿಗೆ ಲಾಕ್‍ಡೌನ್ ಮಾಡಬೇಕು ಎಂದು ಹೇಳಿದ್ದೆ. ಸರಕಾರ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಈಗಾಗಲೇ ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಮತ್ತೆ ಸರಕಾರ ಎಚ್ಚರ ತಪ್ಪದೇ ಸೂಕ್ತ ಕ್ರಮ ವಹಿಸಬೇಕು. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಹೆಚ್ಚಾಗುತ್ತದೆ ಎಂದು ಕೆಲವು ತಜ್ಞರ ವರದಿಗಳು ಬರುತ್ತಿವೆ ಎಂದರು.

ರಾಜ್ಯದಲ್ಲಿ ಮತ್ತೊಂದು ಕಡೆ ಪ್ರವಾಹದ ಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಜಿಲ್ಲಾ ಕೇಂದ್ರದಿಂದ ಕೆಲಸ ಮಾಡುವಂತೆ ಸೂಚಿಸಬೇಕು. ಜೊತೆಗೆ ನಮ್ಮ ರಾಜ್ಯದ ಗಡಿಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಬೇಕು ಎಂದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇತ್ತೀಚೆಗೆ ಹದಗೆಡುತ್ತಿದೆ. ಸರಕಾರ ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕೇವಲ 200, 300 ರೂ.ಗಳಿಗೆ ಕೊಲೆ ಮಾಡುವ ಪ್ರಕರಣಗಳು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿವೆ. ಇದರ ಜೊತೆಗೆ ಸರಗಳ್ಳತನ, ದರೋಡೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಇದೇ ವೇಳೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News