ಸಂಪಾಜೆ ರಸ್ತೆಗೆ ಹಾನಿ: ತಜ್ಞರ ಸಲಹೆ ಪಡೆಯಲು ನಿರ್ಧಾರ

Update: 2021-07-31 14:39 GMT

ಮಡಿಕೇರಿ: ಭಾರೀ ಮಳೆಯಿಂದಾಗಿ ಮಂಗಳೂರು ಹೆದ್ದಾರಿಯಲ್ಲಿ ಬಿರುಕು ಮತ್ತು ಭೂ ಕುಸಿತ ಉಂಟಾಗುತ್ತಿದ್ದು, ಇದಕ್ಕೆ ಕಾರಣ ತಿಳಿಯಲು ತಜ್ಞರ ಸಲಹೆ ಪಡೆದು ಪರಿಹಾರ ಕಂಡು ಹಿಡಿಯಲಾಗುತ್ತದೆ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಶನಿವಾರ ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಬಿರುಕು, ಭೂ ಕುಸಿತ ಸಾಧ್ಯತೆ, ರಸ್ತೆ ಮಧ್ಯದಲ್ಲೇ ಜಲ ಉಕ್ಕುತ್ತಿರುವುದನ್ನು ಪರಿಶೀಲನೆ ನಡೆಸಿದರು. ಎರಡನೇ ಮೊಣ್ಣಂಗೇರಿ ಬಳಿ ಹೆದ್ದಾರಿಯ ಮಧ್ಯದಲ್ಲಿ ಬಿರುಕು ಬಿಟ್ಟಿರುವ ಸ್ಥಳ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ ಹೈವೇ ಪ್ರಾಧಿಕಾರದ ಇಂಜಿನಿಯರ್‍ಗಳು ಮತ್ತು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, 3 ವರ್ಷಗಳಿಂದ ಕೊಡಗಿನಲ್ಲಿ ಸತತವಾಗಿ ಮಹಾಮಳೆ ಕಂಡು ಬಂದು ಭೂ ಕುಸಿತ ಉಂಟಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಸಂಪಾಜೆಯವರೆಗೆ 18 ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದೆವು. ಹೀಗಿದ್ದರೂ ಮತ್ತೆ ಸಣ್ಣ ಪ್ರಮಾಣದ ಭೂ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸಲಹೆಯಂತೆ ಸಂಪಾಜೆಯವರೆಗೆ ಹೆಚ್ಚುವರಿಯಾಗಿ 22 ಕಡೆ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. 

ಎರಡನೇ ಮೊಣ್ಣಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆ ಮಧ್ಯೆಯೇ ಬಿರುಕು ಬಂದಿರುವುದಕ್ಕೆ ಜಲಸ್ಫೋಟ ಕಾರಣವಾಗಿರಬಹುದೇ ಎಂದು ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತಜ್ಞರಿಂದ ಮಣ್ಣು ಪರೀಕ್ಷೆ ಮತ್ತು ಸ್ಥಳ ಪರಿಶೀಲನೆ ಕೈಗೊಂಡು ನೈಜವಾದ ಕಾರಣ ಕಂಡು ಹಿಡಿಯಲಾಗುತ್ತದೆ.  ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಒತ್ತಡ ಹೆಚ್ಚಾಗಿರುವುದೂ ರಸ್ತೆ ಬಿರುಕು ಹಾಗೂ ಭೂ ಕುಸಿತಕ್ಕೆ ಕಾರಣವೇ ಎಂದು ಪರಿಣಿತರ ತಂಡದ ಪರಿಶೀಲನೆ ನಂತರ ತಿಳಿಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ಚಂದ್ರಪ್ಪ ಮತ್ತಿತರರು ಹಾಜರಿದ್ದರು. 

ಸೈನಿಕನಿಗೆ ಸಾಂತ್ವನ
ಜು.25ರಂದು ಹಲ್ಲೆಗೊಳಗಾದ ಸೈನಿಕ ಅಶೋಕ್ ಮನೆಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. 

ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಹಾಗೇ ಬಿಡುವ ಪ್ರಶ್ನೆಯೇ ಇಲ್ಲ, ಮತ್ತಷ್ಟು ಕಠಿಣ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದರು.

ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. ಎಲ್ಲರ ಹೇಳಿಕೆಗಳನ್ನು ಮರು ದಾಖಲಿಸಿಕೊಂಡು ಎಲ್ಲಾ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಸೈನಿಕ ಮತ್ತು ಅವರ ಕುಟುಂಬದೊಂದಿಗೆ ಸರಕಾರ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಈ ಸಂದರ್ಭ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಹಾಗೂ ಬಿಜೆಪಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News