'ಮೇಕೆದಾಟು' ಯೋಜನೆ ತಕ್ಷಣ ಆರಂಭಿಸಿ: ಸಿಎಂಗೆ ಡಿ.ಕೆ.ಶಿವಕುಮಾರ್ ಆಗ್ರಹ

Update: 2021-07-31 15:23 GMT

ಬೆಂಗಳೂರು, ಜು. 31: 'ಮೇಕೆದಾಟು ಅಣೆಕಟ್ಟೆ ನಮ್ಮ ಪಾಲಿನ ನೀರು ಬಳಸಿಕೊಳ್ಳುವ ಯೋಜನೆ. ಈ ಯೋಜನೆ ಮಾಡಬಾರದು ಎಂದು ಯಾವ ಆದೇಶವೂ ಇಲ್ಲ. ಹೀಗಾಗಿ ಸರಕಾರ ಯೋಜನೆ ಆರಂಭಿಸಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಶನಿವಾರ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮೇಕೆದಾಟು ಯೋಜನೆಯಿಂದ ಒಂದು ಎಕರೆಯೂ ನೀರಾವರಿ ಆಗುವುದಿಲ್ಲ. ವಿದ್ಯುತ್ ಉತ್ಪಾದನೆ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ತಮಿಳುನಾಡಿನ ಬಿಜೆಪಿ, ಡಿಎಂಕೆ ಅಥವಾ ಬೇರೆ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ. ನಮ್ಮ ಮುಖ್ಯಮಂತ್ರಿ ನೀರಾವರಿ ಸಚಿವರಾಗಿದ್ದವರು. ಅವರಿಗೆ ಈ ಯೋಜನೆ ಬಗ್ಗೆ ಅರಿವಿದೆ. ಅವರು ಯೋಜನೆ ಆರಂಭಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

`ಪರಿಸರ ಇಲಾಖೆ ಅನುಮತಿ ಸಿಕ್ಕಿರುವಾಗ ನಮ್ಮ ಸಿಎಂ ಅವರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ಇತರೆ ಇಲಾಖೆಗಳ ಅನುಮತಿ ಪಡೆದು, ಆದಷ್ಟು ಬೇಗ ಗುದ್ದಲಿ ಪೂಜೆ ಮಾಡಿ, ಕೆಲಸ ಆರಂಭಿಸಲಿ. ಬೇರೆಯವರ ಮೇಲೆ ದೂರುತ್ತಾ ಕೂರುವುದಲ್ಲ. ಕೆಲಸ ಆರಂಭಿಸಬೇಡಿ ಎಂದು ಯಾವುದಾದರೂ ಆದೇಶ ಇದೆಯಾ? ನೀವು ಕೆಲಸ ಆರಂಭಿಸಿ. ನಿಮಗೆ ಬೇಕಾದ ಎಲ್ಲ ರೀತಿಯ ಸಹಕಾರ ನಾವು ನೀಡುತ್ತೇವೆ ಎಂದು ಹೇಳುತ್ತಿದ್ದೇವೆ. ಅವರು ಯಾಕೆ ಇಚ್ಛಾಶಕ್ತಿ ತೋರುತ್ತಿಲ್ಲವೋ ಗೊತ್ತಿಲ್ಲ. ಅವರು ಸಂಪುಟ ವಿಸ್ತರಣೆ ಬಗ್ಗೆ ಏನಾದರೂ ಮಾಡಿಕೊಳ್ಳಲಿ, ಯೋಜನೆ ಬಗ್ಗೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ' ಎಂದು ಶಿವಕುಮಾರ್ ಪ್ರತಿಕ್ರಿಯೆ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News