ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಿ: ಚಿಕ್ಕಮಗಳೂರು ಡಿಸಿ ಕೆ.ಎನ್.ರಮೇಶ್

Update: 2021-07-31 16:17 GMT

ಚಿಕ್ಕಮಗಳೂರು, ಜು.31: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಜಿಟಿ, ಎಸ್‍ಎಲ್ಟಿ ರಾಜ್ಯ ಮಟ್ಟದ ತಾಂತ್ರಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹಲವಾರು ಸರಕಾರಿ ಕಚೇರಿಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ಸಮಾಗ್ರಿಗಳನ್ನು ಬಳಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಿಗಾ ವಹಿಸಿ ಕಚೇರಿಗಳಲ್ಲಿ ಹಾಗೂ ಸರಕಾರಿ ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಮಾಡುವಂತೆ  ತಿಳಿಸಿದ ಅವರು, ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಟವಾಗುತ್ತಿದ್ದು, ಅಂತವರ ವಿರುದ್ಧ ದಂಡ ವಿಧಿಸಿ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ತಿಳಿಸಿದರು.

ನಗರ ಸ್ಥಳಿಯ ಸಂಸ್ಥೆಗಳು ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಬೇಕು. ಮೂಲದಲ್ಲಿಯೆ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವನ್ನಾಗಿ ಬೇರ್ಪಡಿಸಿ ಸಂಗ್ರಹಿಸಬೇಕು. ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಧ್ವನಿ ವರ್ದಕಗಳ ಮೂಲಕ ಅರಿವು ಮೂಡಿಸಬೇಕು. ಬೇರ್ಪಡಿಸಿದ ತ್ಯಾಜ್ಯವನ್ನು ಸಮರ್ಪಕ ವಾಹನಗಳ ಮೂಲಕ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ಅವುಗಳ ಸಂಸ್ಕರಣೆ  ಮತ್ತು ವೈಜ್ಞಾನಿಕವಾಗಿ ವೀಲೆವಾರಿ ಮಾಡಬೇಕು ಎಂದ ಅವರು, ನೆಲ ಭರ್ತಿ ಹೊಂದಿರುವ ನಗರ, ಸ್ಥಳೀಯ ಸಂಸ್ಥೆಗಳ ನವೀಕರಣ ಅವಧಿ ಮುಗಿದಿದ್ದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನವೀಕರಿಸಲು  ಕ್ರಮಕೈಗೊಳ್ಳಬೇಕು ಎಂದರು.

ಅವೈಜ್ಞಾನಿಕ ತ್ಯಾಜ್ಯ ನಿರ್ವಾಹಣೆಯಿಂದಾಗಿ ಉಂಟಾಗುತ್ತಿರುವ ಸಮಸ್ಯೆಗಳು ಹಾಗೂ ಅಕ್ರಮ ತ್ಯಾಜ್ಯ ಸುಡುವಿಕೆ ಮುಂತಾದವುಗಳ ಕುರಿತಾಗಿ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಘನತ್ಯಾಜ್ಯ ವಸ್ತು ನಿರ್ವಾಹಣೆಯ  ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದು ತಿಳಿಸಿದರು.

ಪೌರಾಯುಕ್ತರು ತ್ಯಾಜ್ಯ ಸಂಸ್ಕರಣೆ ಜಾಗದಲ್ಲಿ ಲಿಟೆಚ್ ಸಂಸ್ಕರಣಾ ಘಟಕಗಳನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಸಂಸ್ಕರಿಸಿಲ್ಲದ ಲಿಟೆಚ್ ದ್ರಾವಣವು ಸಮೀಪದ ತೊರೆ ಅಥವಾ ನೀರಿನ ಮೂಲಗಳನ್ನು ಸೇರದಂತೆ ಕ್ರಮವಹಿಸಬೇಕು ಎಂದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News