ಯಡಿಯೂರಪ್ಪ ಅವರ 10 ಸಾವಿರ ಕೋ. ರೂ. ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಲಿ: ಕಾಂಗ್ರೆಸ್ ವಕ್ತಾರ ರೂಬೆನ್ ಮೋಸೆಸ್

Update: 2021-07-31 16:20 GMT
ರೂಬೆನ್ ಮೋಸೆಸ್

ಚಿಕ್ಕಮಗಳೂರು, ಜು.31: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ 10 ಸಾವಿರ ಕೂ. ರೂ. ಭ್ರಷ್ಟಾಚಾರ ಮಾಡಿರುವುದಾಗಿ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿರುವುದರಿಂದ ಕೂಡಲೇ ಯಡಿಯೂರಪ್ಪ ಅವರ ಮೇಲಿನ ಈ ಆರೋಪದ ಬಗ್ಗೆ ತನಿಖೆ ಮಾಡಬೇಕೆಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬೆನ್ ಮೊಸಸ್ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್ ಈ ಆರೋಪ ಮಾಡಿಲ್ಲ. ಸ್ವತಃ ಬಿಜೆಪಿಯ ಹಿರಿಯ ಶಾಸಕರೇ ಆರೋಪ ಮಾಡಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷವೆಂದು ಹೇಳುವ ಬಿಜೆಪಿಗರು ಈ ಆರೋಪ ಸಂಬಂಧ ಕೂಡಲೇ ತನಿಖೆ ಮಾಡಬೇಕು. ಯಡಿಯೂರಪ್ಪನ ಮೇಲಿನ ಆರೋಪ ಸುಳ್ಳು ಎನ್ನುವುದಾದರೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಅವರನ್ನು ಉಚ್ಛಾಟಿಸದಿದ್ದರೆ ಯಡಿಯೂರಪ್ಪನವರ ಮೇಲೆ ಮಾಡಿರುವ ಆರೋಪ ಸತ್ಯವೆಂದು ದೇಶಕ್ಕೆ ತಿಳಿಯುತ್ತದೆ ಎಂದಿದ್ದಾರೆ.

ರಾಜ್ಯವನ್ನು ಮಾಜಿ ಸಿಎಂ ಯಡಿಯೂರಪ್ಪ ಲೂಟಿ ಮಾಡಿ 10 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿರುವ ವಿಚಾರವನ್ನು ಅಧಿಕಾರದ ಆಸೆಗಾಗಿ ಮುಚ್ಚಿಟ್ಟಿದ್ದ ಯತ್ನಾಳ್ ಅವರನ್ನು ಸಹ ತನಿಖೆಗೆ ಒಳಪಡಿಸಬೇಕು. ಹತ್ತು ಸಾವಿರ ಕೋಟಿ ಯಾವ ರೀತಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ರಾಜ್ಯದ ಜನತೆಗೆ ಅವರು ತಿಳಿಸಬೇಕು ಎಂದು ಆಗ್ರಹಿಸಿರುವ ಅವರು, ಯತ್ನಾಳ್ ಅವರು ಅನೇಕ ದಿನಗಳಿಂದ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಮೇಲೆ ಆರೋಪ ಮಾಡುತ್ತಿದ್ದರೂ ಸಹ ಬಿಜೆಪಿ ಹೈಕಮಾಂಡ್ ಮೌನವಹಿಸಿರುವುದನ್ನು ನೋಡಿದರೆ ಯಡಿಯೂರಪ್ಪನ ಮೇಲೆ ಯತ್ನಾಳ್ ಮಾಡಿರುವ ಆರೋಪ ಸತ್ಯವೆನಿಸುತ್ತದೆ. ಇಲ್ಲದಿದ್ದರೆ ಇಷ್ಟು ದಿನಗಳಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಯತ್ನಾಳ್ ಅವರನ್ನು ಏಕೆ ಉಚ್ಛಾಟಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಜನ ಕೊರೋನದಿಂದ ಇನ್ನೂ ಚೇತರಿಸಿಕೊಂಡಿಲ್ಲ, ಅನೇಕ ಕಡೆ ಪ್ರವಾಹದಿಂದ ಜನ ಪರದಾಡುತ್ತಿದ್ದಾರೆ, ಬಿಜೆಪಿಯ ಭ್ರಷ್ಟ ಆಡಳಿತದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೆಲಸವಿಲ್ಲದೆ, ವ್ಯಾಪಾರವಿಲ್ಲದೆ ಬೇಸತ್ತಿರುವ ರಾಜ್ಯದ ಜನರಿಗೆ ಸ್ಪಂದಿಸದ ಶಾಸಕರುಗಳು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವುದನ್ನು ನೋಡಿದರೆ ಜನರ ಬಗ್ಗೆ ಅವರಿಗಿರುವ ಕಾಳಜಿ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರೂಬೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News