ಲಂಚ ಸ್ವೀಕಾರ ಪ್ರಕರಣ: ನರಿಯಂದಡ ಪಿಡಿಒ ಗೆ 7 ವರ್ಷ ಸಜೆ

Update: 2021-07-31 16:27 GMT

ಮಡಿಕೇರಿ ಜು.31 : ವ್ಯಕ್ತಿಯೊಬ್ಬರಿಂದ 3 ಸಾವಿರ ರೂ. ಲಂಚ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಸಜೆ ಮತ್ತು 8 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ. 2017ರಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದ ಎ.ಜಿ.ಸಚಿನ್ ಎಂಬವರೇ ಶಿಕ್ಷೆಗೆ ಒಳಗಾದವರಾಗಿದ್ದಾರೆ. 

ಪ್ರಕರಣ ಹಿನ್ನೆಲೆ
ನರಿಯಂದಡ ಗ್ರಾಮ ನಿವಾಸಿ ಕೆ.ಎಸ್. ಸುಬ್ರಮಣ್ಯ ಎಂಬವರು ಸರ್ವೇ ನಂಬರ್ 101/24ರಲ್ಲಿ 10 ಸೆಂಟ್ ನಿವೇಶನ ಹೊಂದಿದ್ದು, ಈ ಸ್ಥಳಕ್ಕೆ ನಮೂನೆ 9 ಮತ್ತು 11 ಒದಗಿಸುವಂತೆ ನರಿಯಂದಡ ಗ್ರಾ.ಪಂ.ಗೆ 5/1/2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಆ  ಸಂದರ್ಭ ಗ್ರಾ.ಪಂ ಪಿಡಿಒ ಆಗಿದ್ದ ಎ.ಜಿ. ಸಚಿನ್ ಎಂಬಾತ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಅರ್ಜಿದಾರ ಸುಬ್ರಮಣ್ಯ ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. 

ಎಸಿಬಿ ಎಸ್.ಪಿ ಕೆ.ಎಂ. ಮಂಜು ಅವರು ದೂರು ದಾಖಲಿಸಿಕೊಂಡಿದ್ದರು. ನಂತರ ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಆರೋಪಿ ಪಿಡಿಓ 3 ಸಾವಿರ ಲಂಚದ ಹಣದ ಸಹಿತ ಸಿಕ್ಕಿ ಬಿದ್ದಿದ್ದ. ತದನಂತರ ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ ಮಂಜು ಅವರು ಆರೋಪಿ ಪಿಡಿಓ ಅವರನ್ನು ಪಿಡಿಜೆ ಮತ್ತು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ಮಡಿಕೇರಿಯ ಪ್ರಧಾನ ಮತ್ತು ಸತ್ರ ವಿಶೇಷ ನ್ಯಾಯಾಲಯಕ್ಕೆ ಎ.ಜಿ.ಸಚಿನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. 

ಸಿಸಿ.47/2018ರಲ್ಲಿ ವಿಚಾರಣೆ ನಡೆಸಿದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಸರಕಾರಿ ವಿಶೇಷ ಅಭಿಯೋಜಕರಾದ ಎಂ.ಎಂ.ಕಾರ್ಯಪ್ಪ ಅವರು ಕೋರ್ಟ್‍ನಲ್ಲಿ ಪ್ರಬಲ ವಾದ ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಪ್ರಧಾನ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿನರಾಳಕರ ಭೀಮರಾವ್ ಲಗಮಪ್ಪ ಅವರು 2021ರ ಜು.30ರಂದು ಆರೋಪಿ ಪಿಡಿಓ ಸಚಿನ್ ಲಂಚ ಸ್ವೀಕರಿಸಿದ್ದು, ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು. 

ಜು.31ರಂದು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ ನ್ಯಾಯಾಲಯ ಒಟ್ಟು 7 ವರ್ಷ ಸಜೆ ಮತ್ತು 8 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ತೀರ್ಪಿನ ಪ್ರಕಾರ 7 ಪಿ.ಸಿ. ಕಾಯಿದೆ ಅಡಿಯಲ್ಲಿ 3 ವರ್ಷ ಸಜೆ 3 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಸಜೆ, ಕಲಂ 13(2) ಪಿ.ಸಿ. ಕಾಯಿದೆ ಅಡಿಯಲ್ಲಿ 4 ವರ್ಷ ಸಜೆ 5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ಎಸಿಬಿ ಪರ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯಂತರ(ಎಸಿಬಿ) ಎಂ.ಎಂ. ಕಾರ್ಯಪ್ಪ ಅವರ ಕಾರ್ಯ ಕ್ಷಮತೆಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News