'ಒಂದೇ ಹಂತದಲ್ಲಿ ಸಂಪುಟ ರಚನೆಗೆ ಬಿಜೆಪಿ ವರಿಷ್ಠರ ಚಿಂತನೆ'

Update: 2021-07-31 16:31 GMT

ಬೆಂಗಳೂರು, ಜು.31: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ದಿಲ್ಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸಂಪುಟ ರಚನೆ ಕುರಿತು ಚರ್ಚೆ ನಡೆಸಿದ್ದು, ಒಂದೇ ಹಂತದಲ್ಲಿ ಸಚಿವ ಸಂಪುಟ ರಚನೆಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೆರಡು ವರ್ಷಗಳಲ್ಲಿ ವಿಧಾನಸಭೆಗೆ ಚುನಾವಣೆ ಎದುರಾಗಲಿರುವುದರಿಂದ, ಯುವ, ಉತ್ಸಾಹಿ ಶಾಸಕರ ತಂಡವನ್ನು ಸಂಪುಟಕ್ಕೆ ಸೇರ್ಪಡೆ ಮಾಡಲು ಹೈಕಮಾಂಡ್ ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಪುನಃ ಹೊಸದಿಲ್ಲಿಗೆ ತೆರಳಿ ಸಚಿವ ಸಂಪುಟ ರಚನೆಯ ಮಾತುಕತೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲವೂ ಅಂದುಕೊಂಡಂತೆ ಆದಲ್ಲಿ ಬುಧವಾರ ಅಥವಾ ಗುರುವಾರ ರಾಜ್ಯದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ. ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುದರ ಬಗ್ಗೆ ಈ ಬಾರಿ ಹೈಕಮಾಂಡ್ ಹೆಚ್ಚು ಪ್ರಭಾವಶಾಲಿಯಾಗಿರಲಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ವಲಸೆ ಬಂದು ಸಚಿವರಾಗಿದ್ದವರನ್ನು ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆ ಬೇಡವೇ ಎಂಬುದರ ಬಗ್ಗೆಯೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರಲಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿಯ ಹೊಸದಿಲ್ಲಿಯ ಭೇಟಿ ಸಂದರ್ಭದಲ್ಲಿ ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಒಂದಷ್ಟು ಮಂದಿಯ ಹೆಸರುಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಜೆ.ಪಿ.ನಡ್ಡಾ ನಡುವೆ ಚರ್ಚೆ ನಡೆದಿದೆ. ಆದರೆ, ಪೂರ್ಣ ಪ್ರಮಾಣದ ಸಂಪುಟ ರಚನೆಯ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆದಿಲ್ಲ. ಆದುದರಿಂದ, ಮುಖ್ಯಮಂತ್ರಿ ಪುನಃ ಹೊಸದಿಲ್ಲಿಗೆ ತೆರಳಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಭೇಟಿ ಬಳಿಕ ಹೈಕಮಾಂಡ್ ನೇರವಾಗಿ ರಾಜ್ಯಕ್ಕೆ ನೂತನ ಸಚಿವರ ಹೆಸರುಗಳನ್ನು ಕಳುಹಿಸಿಕೊಡಲಿದೆ ಎಂದು ತಿಳಿದು ಬಂದಿದೆ.

'ಬಿಎಸ್‍ವೈ ನಿವಾಸದತ್ತ ಆಕಾಂಕ್ಷಿಗಳ ದಂಡು': ಸಚಿವ ಸಂಪುಟ ರಚನೆ ಪ್ರಕ್ರಿಯೆ ಕುರಿತು ಮಾತುಕತೆಗಳು ಆರಂಭವಾಗುತ್ತಿದ್ದಂತೆ ಬಿಜೆಪಿಯ ಶಾಸಕರು, ಮಾಜಿ ಸಿಎಂ ಯಡಿಯೂರಪ್ಪ ನಿವಾಸದತ್ತ ದೌಡಾಯಿಸುತ್ತಿದ್ದಾರೆ. ಪ್ರಾದೇಶಿಕತೆ, ಜಾತಿ, ಹಿರಿತನದ ಆಧಾರದಲ್ಲಿ ತಮ್ಮನ್ನು ಸಚಿವ ಸಂಪುಟಕ್ಕೆ ಪರಿಗಣಿಸುವಂತೆ ಮುಖ್ಯಮಂತ್ರಿಗೆ ಸೂಚಿಸುವಂತೆ ಆಕಾಂಕ್ಷಿಗಳು ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News