ಗಾಂಧಿಜಿಯ ಸಬರಮತಿ ಆಶ್ರಮ ಅಭಿವೃದ್ಧಿ ಯೋಜನೆಗೆ 130ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳ ವಿರೋಧ

Update: 2021-08-04 19:03 GMT

ಅಹ್ಮದಾಬಾದ್, ಆ.4: ಮಹಾತ್ಮಾ ಗಾಂಧೀಜಿಯವರು 13 ವರ್ಷ ನೆಲೆಸಿದ್ದ ಗುಜರಾತ್ ನ ಸಬರಮತಿ ಆಶ್ರಮವನ್ನು ವಿಶ್ವದರ್ಜೆಯ ಪ್ರವಾಸೀ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದ ಸುಮಾರು 1,200 ಕೋಟಿ ರೂ. ಮೊತ್ತದ ಯೋಜನೆಗೆ 130ಕ್ಕೂ ಅಧಿಕ ಗಣ್ಯ ವ್ಯಕ್ತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಗಾಂಧಿ ಆಶ್ರಮ ಸ್ಮಾರಕ ಮತ್ತು ಪ್ರಾಕಾರ ಅಭಿವೃದ್ಧಿ ಯೋಜನೆಯು ಆಶ್ರಮದ ಸ್ವರೂಪವನ್ನೇ ಬದಲಾಯಿಸಲಿದೆ. 54 ಎಕರೆ ವ ವಿಸ್ತೀರ್ಣದ ಆಶ್ರಮ ಸಂಕೀರ್ಣದಲ್ಲಿರುವ 177 ಕಟ್ಟಡಗಳಲ್ಲಿ, ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿರುವ ಕೇವಲ 65 ಕಟ್ಟಡಗಳು ಮಾತ್ರ ಉಳಿದುಕೊಳ್ಳಲಿವೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‌

ಯೋಜನೆ ಜಾರಿಯಾದರೆ ತಾವು ಬೀದಿಗೆ ಬೀಳಬಹುದು ಎಂದು ಇಲ್ಲಿನ ಸುಮಾರು 200ಕ್ಕೂ ಅಧಿಕ ಕುಟುಂಬಗಳು ಆತಂಕ ಸೂಚಿಸಿವೆ. 1900ರ ಆದಿಭಾಗದಲ್ಲಿ ಈ ಆಶ್ರಮದಲ್ಲಿ ಗಾಂಧೀಜಿ ನೆಲೆಸಿದ್ದಾಗ ಇಲ್ಲಿನ ನಿವಾಸಿಗಳಾಗಿದ್ದವರ ವಂಶಸ್ಥರೇ ಈಗಲೂ ಈ ಆಶ್ರಮದ ಸಂಕೀರ್ಣದಲ್ಲಿ ವಾಸಿಸುತ್ತಿದ್ದಾರೆ. ಯೋಜನೆ ಜಾರಿಯಾದರೆ ಗಾಂಧೀಜಿಯವರ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತ ಅತ್ಯಂತ ವಿಶ್ವಾಸಾರ್ಹ ಸ್ಮಾರಕವು ಪ್ರತಿಷ್ಠೆ ಹಾಗೂ ವಾಣಿಜ್ಯೀಕರಣದ ಉಪಕ್ರಮಗಳಿಗೆ ಬಲಿಯಾಗಲಿದೆ ಎಂದು ಗಣ್ಯ ವ್ಯಕ್ತಿಗಳು ಹೇಳಿಕೆಯಲ್ಲಿ ಆತಂಕ ಸೂಚಿಸಿದ್ದಾರೆ.

ಹೇಳಿಕೆಗೆ ಸಹಿ ಹಾಕಿದವರಲ್ಲಿ ಸಿನೆಮ ನಿರ್ಮಾಪಕ ಆನಂದ್ ಪಟವರ್ಧನ್, ಇತಿಹಾಸಜ್ಞರಾದ ರಾಮಚಂದ್ರ ಗುಹಾ, ರಾಜಮೋಹನ್ ಗಾಂಧಿ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎ.ಪಿ ಶಾ, ಸಾಹಿತಿ ನಯನತಾರಾ ಸೆಹಗಲ್, ಪತ್ರಕರ್ತರಾದ ಪಿ ಸಾಯಿನಾಥ್, ಗಾಯಕ ಟಿಎಂ ಕೃಷ್ಣನ್ ಸೇರಿದ್ದಾರೆ.

ಪ್ರತೀ ವರ್ಷ ಲಕ್ಷಾಂತರ ಭಾರತೀಯರು, ವಿಶೇಷವಾಗಿ ಶಾಲಾ ಮಕ್ಕಳು, ವಿದೇಶಿ ಪ್ರವಾಸಿಗರು ಸಾಬರ್ಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಈ ಪ್ರದೇಶಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ವಿಶ್ವದರ್ಜೆಯ ಸೌಕರ್ಯದ ಅಗತ್ಯ ಎಂದಿಗೂ ಕಂಡುಬಂದಿಲ್ಲ.ಗಾಂಧೀಜಿಯವರ ವರ್ಚಸ್ಸು , ಪ್ರಭಾವ, ಇಲ್ಲಿನ ಸರಳತೆ ಮತ್ತು ವಿಶ್ವಾಸಾರ್ಹತೆಯೇ ಪ್ರವಾಸಿಗರ ಆಕರ್ಷಣೆಗೆ ಸಾಕಾಗುತ್ತದೆ. ಗಾಂಧೀಜಿಯವರಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಯಾವುದೇ ಸರಕಾರ ವಶಕ್ಕೆ ಪಡೆಯುವುದನ್ನು ನಾವು ವಿರೋಧಿಸುತ್ತೇವೆ. ಸಾರ್ವಜನಿಕರ ಹಣವನ್ನು ಸರಕಾರ ಇಂತಹ ಸಂಸ್ಥೆಗಳ ಸೂಕ್ತ ನಿರ್ವಹಣೆಗೆ ಬಳಸಬೇಕು ಮತ್ತು ಇತಿಹಾಸತಜ್ಞರು, ಖ್ಯಾತ ಗಾಂಧಿವಾದಿಗಳು ಹಾಗೂ ಪುರಾತತ್ವಜ್ಞರ ಸಲಹೆ ಪಡೆದು ಇವುಗಳ ನಿರ್ವಹಣೆ ಮಾಡಬೇಕು ಎಂದು ಹೇಳಿಕೆ ತಿಳಿಸಿದೆ.

ಯೋಜನೆಯ ಜಾರಿಗೆ ಗುಜರಾತ್ ಸರಕಾರ ಆಡಳಿತ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಮೇಲುಸ್ತುವಾರಿ ವಹಿಸಲಿದ್ದಾರೆ ಎಂಬ ವರದಿಯ ಬಗ್ಗೆಯೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿರುವ ಎಲ್ಲಾ ಗಾಂಧಿ ಚಿಂತನೆಯ ಸಂಸ್ಥೆಗಳನ್ನೂ ಕೈವಶ ಮಾಡಿಕೊಂಡು ವಾಣಿಜ್ಯೀಕರಣಗೊಳಿಸುವ ಈಗಿನ ಸರಕಾರದ ಕಾರ್ಯನೀತಿಯ ಮುಂದುವರಿದ ಭಾಗ ಇದಾಗಿದೆ. ಇಂತಹ ಉಪಕ್ರಮಗಳಿಗೆ ಸೇವಾಗ್ರಾಮ ಅತ್ಯಂತ ಕೆಟ್ಟ ನಿರ್ದಶನವಾಗಿದೆ. ಮಹಾತ್ಮಾ ಗಾಂಧೀಜಿಯವರ ಹತ್ಯೆಗೆ ಕಾರಣವಾದ ಶಕ್ತಿಗಳ ಸಿದ್ಧಾಂತದಿಂದ ಪ್ರೇರಣೆ ಪಡೆಯುವ ಕೆಲವರು ಈಗ ದೇಶದಲ್ಲಿ ಅಧಿಕಾರದಲ್ಲಿರುವುದರಿಂದ ಈ ಅಪಾಯವನ್ನು ಕಡೆಗಣಿಸಲಾಗದು ಎಂದು ಹೇಳಿಕೆ ತಿಳಿಸಿದೆ.

ಆಶ್ರಮದ ನಿರ್ವಹಣಾ ಮಿತಿಯಿಂದಲೂ ಆಕ್ಷೇಪ

ಸಾಬರ್ಮತಿ ಆಶ್ರಮದ ವ್ಯವಸ್ಥಾಪನೆ ಮತ್ತು ನಿರ್ವಹಣಾ ಸಮಿತಿ ‘ಸಾಬರ್ಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್’ ಕೂಡಾ ಯೋಜನೆಯಲ್ಲಿ ಬಳಸಿರುವ ‘ವಿಶ್ವದರ್ಜೆ’ ಪದಕ್ಕೆ ಆಕ್ಷೇಪ ಸೂಚಿಸಿದೆ.

ಈ ಆಶ್ರಮವನ್ನು ದಯವಿಟ್ಟು ವಿಶ್ವದರ್ಜೆಯ ಪ್ರವಾಸೀ ಸ್ಥಳ ಎಂದು ನೋಡಬೇಡಿ. ಇದು ನಮಗ್ಯಾರಿಗೂ ಸ್ವೀಕಾರಾರ್ಹವಲ್ಲ. ಈ ಆಶ್ರಮ ಪ್ರವಾಸೀ ತಾಣದ ಸ್ಥಳವಲ್ಲ’ ಎಂದು ಟ್ರಸ್ಟ್ ನ ಅಧ್ಯಕ್ಷ ಇಳಾ ಭಟ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News