ಸ್ಪಿರುಲಿನಾ ಚಿಕ್ಕಿಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ಡಾ.ಸಿ.ಎಸ್.ಕೆಧಾರ್

Update: 2021-08-04 19:13 GMT

ರಾಮನಗರ, ಆ.4: ಸ್ಪಿರುಲಿನಾ ಚಿಕ್ಕಿಯನ್ನು ಯುರೋಪ್, ಅಮೇರಿಕಾ ದೇಶಗಳಲ್ಲಿ ಸೂಪರ್ ಫುಡ್ ರೂಪದಲ್ಲಿ ಬಳಸುತ್ತಿದ್ದು. 2013ರಲ್ಲಿ ಈ ಬಗ್ಗೆ ಸಂಶೋಧನೆ ಸಹ ಕೈಗೊಳ್ಳಲಾಗಿದ್ದು,  ಸ್ಪಿರುಲಿನಾ ಚಿಕ್ಕಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ತುಮಕೂರು ಸ್ಪಿರುಲಿನಾ ಫೌಂಡೇಷನ್ ಯೋಜನಾ ಸಲಹೆಗಾರ ಡಾ.ಸಿ.ಎಸ್.ಕೆಧಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತುಮಕೂರು ಸ್ಪಿರುಲಿನಾ ಫೌಂಡೇಷನ್ ಇವರ ಸಹಯೋಗದಲ್ಲಿ ಕೋವಿಡ್-19 ರ 3ನೇ ಅಲೆಯ ಮುಂಜಾಗ್ರಾತೆ ಕ್ರಮವಾಗಿ ಜಿಲ್ಲೆಯ ಅಪೌಷ್ಟಿಕ ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿ ಮತ್ತು ಸ್ಪಿರುಲಿನಾ ಗ್ರಾನ್ಯೂಯಲ್ಸ್ ವಿತರಣಾ ಸಮಾರಂಭ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸ್ಪಿರುಲಿನಾ ಚಿಕ್ಕಿಯನ್ನು ವಿವಿಧ ವಯಸ್ಸಿನವರ ಮೇಲೆ ಪ್ರಯೋಗ ಮಾಡಿ ಪರಿಶೀಲಿಸಿದ ನಂತರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಎಲ್ಲ ವಯಸ್ಸಿನವರಿಗಿಂತ ಮಕ್ಕಳಲ್ಲಿ ಹೆಚ್ಚಿರುವುದು ಕಂಡುಬಂದಿರುತ್ತದೆ.

ಇದುವರೆಗೆ ತುಮಕೂರು ಸ್ಪಿರುಲಿನಾ ಫೌಂಡೇಷನ್ ವತಿಯಿಂದ 7 ಲಕ್ಷ ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿ ನೀಡಲಾಗಿದೆ. ಇಡಿ ದೇಶದ ಎಲ್ಲ ಮಕ್ಕಳ ಆರೋಗ್ಯಕರ ಬೆಳವಣಿಗೆ ಪೂರಕವಾಗಿ 70 ಕೋಟಿ ಮಕ್ಕಳಿಗೂ ಸ್ಪಿರುಲಿನಾ ಚಿಕ್ಕಿ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ಮಾತನಾಡಿ, ಸ್ಪಿರುಲಿನಾ ಚಿಕ್ಕಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಕೋವಿಡ್ ರೋಗಿಗಳಿಗೆ ಕೇವಲ ಜಿಲ್ಲೆಯಲ್ಲಿ ಚಿಕ್ಕಿ ನೀಡಿರುವುದು ಕಂಡುಬಂದಿದೆ. ಸಂಭವನೀಯ 3 ನೇ ಕೋವಿಡ್ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಿ ಅವರಿಗೆ ಸ್ಪಿರುಲಿನಾ ಚಿಕ್ಕಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಎಲ್ಲ ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿ ನೀಡಲಾಗುವುದು ಎಂದರು.

ಆರ್.ಸಿ.ಎಚ್ ಅಧಿಕಾರಿ ಡಾ.ಪದ್ಮಾ ಮಾತನಾಡಿ, ಆಗಸ್ಟ್ 1 ರಿಂದ 8ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. 0 ಯಿಂದ 6 ತಿಂಗಳ ವರೆಗೆ ಮಗುವಿಗೆ ತಾಯಂದಿರು ತಪ್ಪದೇ ಕಡ್ಡಾಯವಾಗಿ ಎದೆಹಾಲು ನೀಡಬೇಕು. ಇದರಿಂದ ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ ಎಂದರು.

ಕರ್ನಾಟಕದಲ್ಲಿ ಶೇ.56.6 ತಾಯಂದಿರು ಮಕ್ಕಳಿಗೆ ಎದೆಹಾಲು ನೀಡುತ್ತಿದ್ದಾರೆ. ಎದೆಹಾಲಿನ ಸೇವನೆಯಿಂದ ಮಕ್ಕಳಿಗೆ ಆಗುವ ಉಪಯುಕ್ತತತೆ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ಸ್ತ್ರೀಯರಲ್ಲಿ ಅರಿವು ಮಾಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್, ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಶಶಿಧರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ ರಾಮನ್, ಸ್ಪಿರುಲಿನಾ ಫೌಂಡೇಷನ್ ಮಹೇಶ್ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್ ಗಂಗಾಧರ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News