ದಲಿತರಿಗೆಂದು ‘ನಿರ್ಭಯ’ ಬದುಕು?

Update: 2021-08-05 05:01 GMT

ಯುಪಿಎ ಅಧಿಕಾರಾವಧಿಯಲ್ಲಿ ದಿಲ್ಲಿಯಲ್ಲಿ ನಡೆದ ‘ನಿರ್ಭಯಾ’ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಅಲ್ಲೋಕಲ್ಲೋಲ ಎಬ್ಬಿಸಿತ್ತು. ಬಹುಶಃ ಈ ದೇಶ ಮಹಿಳೆಯ ಅತ್ಯಾಚಾರ ಮತ್ತು ಹತ್ಯೆಗೆ ಸ್ಪಂದಿಸುವಷ್ಟು ಸೂಕ್ಷ್ಮವಾಗಿದೆ ಎಂದು ವಿಶ್ವಕ್ಕೆ ಗೊತ್ತಾಗಿದ್ದೇ ಅಂದು. ದಿಲ್ಲಿನಗರದ ಬೀದಿಯಲ್ಲಿ ಮೊಂಬತ್ತಿಗಳನ್ನು ಹಿಡಿದು ಮೆರೆವಣಿಗೆಗಳು ನಡೆದವು. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಅಂದಿನ ಯುಪಿಎ ಸರಕಾರದ ವಿರುದ್ಧ ದೇಶ ದೊಡ್ಡ ಪ್ರಮಾಣದ ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಸರಕಾರವೂ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ, ಆರೋಪಿಗಳನ್ನು ತಕ್ಷಣವೇ ಬಂಧಿಸಲು ಕ್ರಮ ಕೈಗೊಂಡಿತು. ಮಾತ್ರವಲ್ಲ, ಕ್ಷಿಪ್ರ ನ್ಯಾಯ ಪ್ರಕ್ರಿಯೆಯ ಮೂಲಕ ಅವರಿಗೆ ಶಿಕ್ಷೆಯೂ ದೊರಕುವಂತಾಯಿತು. ನಾಲ್ವರನ್ನು ಗಲ್ಲಿಗೇರಿಸಲಾಯಿತು. ಇನ್ನೋರ್ವ ಆರೋಪಿ ಆತ್ಮಹತ್ಯೆ ಮಾಡಿಕೊಂಡ. ಮಹಿಳೆಯರ ಸಬಲೀಕರಣಕ್ಕಾಗಿ ‘ನಿರ್ಭಯಾ’ ಹೆಸರಲ್ಲಿ ನಿಧಿಯೊಂದನ್ನು ಸರಕಾರ ಸ್ಥಾಪಿಸಿತು. ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿ ಈ ದೇಶ, ಸರಕಾರ, ನ್ಯಾಯ ವ್ಯವಸ್ಥೆಯ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತು ಎಂದರೆ, ಇನ್ನು ಮುಂದೆ ದೇಶದಲ್ಲಿ ಅತ್ಯಾಚಾರಗಳು ನಡೆಯುವುದೇ ಇಲ್ಲವೇನೋ ಎಂದು ಭಾವಿಸುವಂತಾಗಿತ್ತು. ದುರದೃಷ್ಟವಶಾತ್, ಅಂತಹದೇನೂ ಸಂಭವಿಸಿಲ್ಲ. ನಿರ್ಭಯಾ ಪ್ರಕರಣಕ್ಕೆ ಮೊದಲೂ ಈ ದೇಶದಲ್ಲಿ ನಿರ್ಭಯವಾಗಿ ಅತ್ಯಾಚಾರಿಗಳು ತಮ್ಮ ಕೃತ್ಯಗಳನ್ನು ಎಸಗುತ್ತಾ ಬಂದಿದ್ದರು. ನಿರ್ಭಯಾ ಪ್ರಕರಣದ ಬಳಿಕವೂ ಅವರು ನಿರ್ಭಯವಾಗಿಯೇ ತಮ್ಮ ಕೃತ್ಯಗಳನ್ನು ಮುಂದುವರಿಸುತ್ತಾ ಇದ್ದಾರೆ. ಆಂಧ್ರದಲ್ಲಿ ಮೇಲ್‌ಜಾತಿಗೆ ಸೇರಿದ ಓರ್ವ ಮಹಿಳೆಯನ್ನು ಅತ್ಯಾಚಾರಗೈದ ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿ ಕೊಂದು ಹಾಕಿದರು. ಮಾಧ್ಯಮಗಳು ಪೊಲೀಸರ ‘ನ್ಯಾಯ ಪರತೆ’ಗೆ ಉಘೇ ಎಂದವು. ಆದರೆ ಆಂಧ್ರ, ತೆಲಂಗಾಣದಂತಹ ರಾಜ್ಯಗಳಲ್ಲಿ ಪ್ರತಿದಿನ ದಲಿತ ಮಹಿಳೆಯರ ಅತ್ಯಾಚಾರ, ಹತ್ಯೆಗಳು ನಡೆಯುತ್ತಲೇ ಇವೆ. ಪೊಲೀಸರ ನ್ಯಾಯ ಪರತೆಗಳು ಈ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವುದು ಕಡಿಮೆ. ‘ನಿರ್ಭಯಾ’ ಪ್ರಕರಣಕ್ಕಾಗಿ ಮಿಡಿದ ಅದೇ ದಿಲ್ಲಿಯಲ್ಲಿ ಇದೀಗ 9 ವರ್ಷದ ದಲಿತ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಹತ್ಯೆ ಸುದ್ದಿಯಲ್ಲಿದೆ. ಈ ಬಾಲಕಿಯನ್ನು ಅತ್ಯಾಚಾರಗೈದು, ಜೀವಂತದಹಿಸಲಾಗಿದೆ. ದಿಲ್ಲಿ ಕಂಟೋನ್ಮೆಂಟ್ ಪ್ರದೇಶದ ಪುರಾನ ನಂಗಲ್‌ನಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ ಈಕೆ ರಾತ್ರಿ ನೀರುಕುಡಿಯಲೆಂದು ಹೊರ ಬಂದಾಗ ಸ್ಥಳೀಯ ಅರ್ಚಕನೂ ಸೇರಿದಂತೆ ಮೂವರು ಅತ್ಯಾಚಾರ ಗೈದಿದ್ದಾರೆ. ಬಳಿಕ ಆಕೆಯನ್ನು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ದೇಶದಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆಗೆ ನ್ಯಾಯ ಸಿಗಬೇಕಾದರೆ ಅತ್ಯಾಚಾರ ಸಂತ್ರಸ್ತೆ ಮೇಲ್ವರ್ಗಕ್ಕೆ ಸೇರಿರಬೇಕು ಮತ್ತು ಅತ್ಯಾಚಾರಗೈದ ಆರೋಪಿಗಳು ತೀರಾ ತಳಸ್ತರದ ಸಮುದಾಯದವರಾಗಿರಬೇಕು ಎನ್ನುವ ಅಘೋಷಿತ ನಿಯಮವೊಂದಿದೆ. ಇದಕ್ಕೆ ಹೊರತಾದ ಎಲ್ಲ ಅತ್ಯಾಚಾರಗಳನ್ನು ಈ ದೇಶ ತಲೆ ತಲಾಂತರದಿಂದ ಸಹಜವಾಗಿ ಸ್ವೀಕರಿಸುತ್ತಾ ಬಂದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ದಲಿತ ಅಥವಾ ಬಡವರ್ಗಕ್ಕೆ ಸೇರಿದ್ದರೆ, ಆರೋಪಿಗಳು ಮೇಲ್ವರ್ಗಕ್ಕೆ ಸೇರಿದ್ದರೆ, ಸಂತ್ರಸ್ತರೇ ಆರೋಪಿಗಳಾಗಿ ಬಿಡುವುದಿದೆ. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಆರಂಭದಲ್ಲಿ ಸಂತ್ರಸ್ತರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಅವರಿಗೆ ಜೀವ ಬೆದರಿಕೆಯನ್ನು ಒಡ್ಡಲಾಯಿತು. ಸಂತ್ರಸ್ತರ ಮನೆಗೆ ವರದಿ ಮಾಡಲು ತೆರಳಿದ ವರದಿಗಾರರನ್ನೇ ಬಂಧಿಸಿ ಅವರ ಮೇಲೆ ‘ಸಮಾಜ ಘಾತುಕತನ’ದ ಆರೋಪಗಳನ್ನು ಹೊರಿಸಲಾಯಿತು. ಉನ್ನಾವೊ ಅತ್ಯಾಚಾರ ಪ್ರಕರಣದಲ್ಲೂ ಇದೇ ನಡೆಯಿತು. ಇಲ್ಲಿ ಅತ್ಯಾಚಾರ ಆರೋಪಿ ಬಿಜೆಪಿಯ ಮುಖಂಡನೇ ಆಗಿದ್ದ.

ಭಾರತೀಯ ಸಂಸ್ಕೃತಿಯ ಬಗ್ಗೆ ಬಾಯಿ ತುಂಬಾ ಮಾತನಾಡುವ ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ದಿನದಿಂದ ಹತ್ತು ಹಲವು ‘ನಿರ್ಭಯಾ’ ಪ್ರಕರಣಗಳ ನಡೆದವು. ಅವೆಲ್ಲವೂ ‘ನಿರ್ಭಯಾ’ ಪ್ರಕರಣಕ್ಕಿಂತ ಹಲವು ಪಟ್ಟು ಭೀಕರವಾಗಿದ್ದವು. ಜಮ್ಮುವಿನಲ್ಲಿ ನಡೆದ ಆಸೀಫಾ ಎನ್ನುವ ಮಗುವಿನ ಮೇಲೆ ಎರಡು ದಿನ ದೇವಸ್ಥಾನದೊಳಗೇ ಸಾಮೂಹಿಕ ಅತ್ಯಾಚಾರ ನಡೆಯಿತು. ಬಳಿಕ ಮಗುವನ್ನು ಭೀಕರವಾಗಿ ಕೊಂದು ಹಾಕಿದರು. ಸಮಾಜದ ಗಣ್ಯರೆಂದು ಕರೆಸಿಕೊಂಡವರೇ ಈ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು. ವಿಪರ್ಯಾಸವೆಂದರೆ, ಬಿಜೆಪಿ ನಾಯಕರೆಂದು ಕರೆಸಿಕೊಂಡವರು ಅತ್ಯಾಚಾರಿಗಳ ಪರವಾಗಿ ನಿಂತರು. ಹಾಥರಸ್‌ನಲ್ಲೂ ಸರಕಾರ ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತುಕೊಂಡಿತು. ಉನ್ನಾವೊದಲ್ಲೂ ಅತ್ಯಾಚಾರ ಸಂತ್ರಸ್ತರೇ ಅಪರಾಧಿಗಳಾಗಿ ಬಿಂಬಿತರಾದರು. ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಇತ್ತೀಚಿನ ದಿನಗಳಲ್ಲಿ ಮೇಲ್ವರ್ಗದ ಹಕ್ಕಾಗಿ ಬಿಂಬಿತವಾಗುತ್ತಿವೆೆ.ಇದಕ್ಕೆ ಪೂರಕವಾಗಿ ದಲಿತರ ಕೈಯಿಂದ ಸಂವಿಧಾನದ ಹಕ್ಕುಗಳು ಒಂದೊಂದಾಗಿ ಕೈತಪ್ಪುತ್ತಿವೆ. ದಲಿತರ ಮೇಲೆ ದೌರ್ಜನ್ಯ ನಡೆಸುವ ಹಕ್ಕಿಗಾಗಿಯೇ ಮೇಲ್‌ಜಾತಿಯ ಜನರು ಸಂಘಟಿತರಾಗುತ್ತಿದ್ದಾರೆ ಮತ್ತು ಇದನ್ನು ಶೋಷಿತ ಸಮುದಾಯ ವೌನವಾಗಿ ವೀಕ್ಷಿಸುತ್ತಿದೆ.

2019ರಲ್ಲಿ ಪರಿಶಿಷ್ಟ ಜಾತಿ ವಿರುದ್ಧ 46,000 ದೌರ್ಜನ್ಯ ಪ್ರಕರಣ ದಾಖಲಾಗಿದ್ದು ಹಿಂದಿನ ವರ್ಷಕ್ಕಿಂತ 7ಶೇ. ಹೆಚ್ಚಾಗಿದೆ. ಉತ್ತರಪ್ರದೇಶ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಖಿಲ ಭಾರತ ಮಟ್ಟದಲ್ಲಿ, ದಲಿತರ ವಿರುದ್ಧದ ಅಪರಾಧದಲ್ಲಿ ಆರೋಪಪಟ್ಟಿ ದಾಖಲಿಸುವ ಪ್ರಮಾಣ 78.5ಶೇ. ಆಗಿದ್ದು ಪ್ರತೀ ಮೂರು ಪ್ರಕರಣಗಳಲ್ಲಿ ಒಂದಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ಘೋಷಿಸುತ್ತದೆ. ಒಂದು ವರ್ಷದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸುಮಾರು 16 ಪ್ರಕರಣಗಳಲ್ಲಿ ಕೇವಲ 1 ಪ್ರಕರಣ ಮಾತ್ರ ಇತ್ಯರ್ಥವಾಗುತ್ತದೆ. 2019ರ ಆರಂಭದಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 1.7 ಲಕ್ಷ. ಇದೇ ವರ್ಷದಲ್ಲಿ ಸುಮಾರು 35,000 ಹೆಚ್ಚುವರಿ ಪ್ರಕರಣಗಳು ದಾಖಲಾಗುವುದರೊಂದಿಗೆ ಪ್ರಕರಣಗಳ ಸಂಖ್ಯೆ 2 ಲಕ್ಷ ತಲುಪಿತು. ಈ ವರ್ಷ 13,000ಕ್ಕೂ ಕಡಿಮೆ ಪ್ರಕರಣಗಳು ವಿಲೇವಾರಿಯಾದವು ಮತ್ತು ಸುಮಾರು 4,000 ಪ್ರಕರಣಗಳಲ್ಲಿ ಮಾತ್ರ ದೋಷ ನಿರ್ಣಯವಾಗಿದೆ.

 ದಲಿತರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ದೂರು ದಾಖಲಿಸುವುದೇ ಒಂದು ಸಾಹಸವಾಗಿದೆ. ಆ ಯುದ್ಧದಲ್ಲಿ ಗೆದ್ದ ಬಳಿಕ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲನ್ನು ತುಳಿಯಬೇಕು. ಜೀವಭಯದಿಂದ ತಮಗಾದ ಅನ್ಯಾಯವನ್ನು ನುಂಗಿಕೊಂಡು ಬದುಕುತ್ತಿರುವ ದಲಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸದಿಲ್ಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಹತ್ಯೆ ನಡೆದು ಎರಡು ದಿನಗಳ ಕಳೆದಿವೆಯಾದರೂ, ದೇಶಕ್ಕೆ ಆ ಕುರಿತಂತೆ ಏನೂ ಅನ್ನಿಸಿಲ್ಲ. ಕನಿಷ್ಠ ದಿಲ್ಲಿಯ ಜನರಾದರೂ ಮೊಂಬತ್ತಿಯ ಜೊತೆಗೆ ಬೀದಿಗಿಳಿಯಬೇಕಾಗಿತ್ತು. ಆರಂಭದಲ್ಲಿ ಆಕೆಯ ಸಾವನ್ನು, ಅಪಘಾತ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ತೀರಾ ಒತ್ತಡದ ಬಳಿಕ ಇದೀಗ ದಿಲ್ಲಿ ಸರಕಾರ ತನಿಖೆಗೆ ಆದೇಶಿಸಿದೆ. ತನಿಖೆ ಸಂತ್ರಸ್ತೆಗೆ ನ್ಯಾಯ ನೀಡುತ್ತದೆ ಎಂದು ಭಾವಿಸುವಂತಿಲ್ಲ. ತಕ್ಷಣದ ಆಕ್ರೋಶವನ್ನು, ರಾಜಕೀಯ ಪ್ರತಿಭಟನೆಗಳನ್ನು ವೌನವಾಗಿಸುವ ಉದ್ದೇಶವನ್ನಷ್ಟೇ ಇದು ಹೊಂದಿದೆ. ದಲಿತರು ಮಾತ್ರವಲ್ಲ, ಈ ದೇಶದ ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬರೂ ಸಂಘಟಿತವಾಗಿ ಇಂತಹ ಅತ್ಯಾಚಾರಗಳ ವಿರುದ್ಧ ಬೀದಿಗಿಳಿದಾಗ ಮಾತ್ರ ಕಾನೂನು ಎಚ್ಚರಗೊಂಡೀತು. ಇಲ್ಲವಾದರೆ, ‘ದಲಿತರ ಮೇಲೆ ದೌರ್ಜನ್ಯ, ಕೆಲವು ಸಮುದಾಯಗಳ ಜನ್ಮ ಸಿದ್ಧ ಹಕ್ಕು’ ಎನ್ನುವ ಕಾನೂನು ಅಧಿಕೃತವಾಗಿ ಸಂಸತ್ತಿನಲ್ಲಿ ಜಾರಿಗೊಳ್ಳುವ ದಿನಗಳನ್ನು ನಾವು ಕಾಣಬೇಕಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News