ಮುಖ್ಯಮಂತ್ರಿಗಳೇ ನಮ್ಮನ್ನು ತಿರಸ್ಕರಿಸಿದ್ದಾರೆ: ಶಾಸಕ ನೆಹರೂ ಓಲೆಕಾರ್ ಆಕ್ರೋಶ

Update: 2021-08-05 13:04 GMT
photo: @NSPatilBJP
 

ಹಾವೇರಿ, ಆ. 5: `ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಾದ ಮುಖ್ಯಮಂತ್ರಿಗಳೇ ನಮ್ಮನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ವಿಶ್ವಾಸದಿಂದ ಇದ್ದವರಿಗೆ ಮೋಸ ಮಾಡಲಾಗಿದೆ' ಎಂದು ಹಾವೇರಿ ಶಾಸಕ ನೆಹರೂ ಓಲೆಕಾರ್ ಇಂದಿಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನನಗೆ ಸಚಿವ ಸ್ಥಾನದ ನಿರೀಕ್ಷೆ ಇತ್ತು. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ. ಮೂರನೆ ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ನಮ್ಮ ಮುಖ್ಯಮಂತ್ರಿ ಅವರೇ ತಿರಸ್ಕಾರ ಮಾಡಿದ್ದಾರೆ. ರಾಜ್ಯದಲ್ಲಿ ಛಲವಾಧಿ ಸಮುದಾಯದ 45 ಲಕ್ಷ ಮತಗಳು ಇವೆ. ನಮ್ಮ ಸಮುದಾಯ ಹಾಗೂ ಕಾರ್ಯಕರ್ತರು ಸಚಿವ ಸ್ಥಾನ ನೀಡದ್ದಕ್ಕೆ ಆಕ್ರೋಶಗೊಂಡಿದ್ದಾರೆ' ಎಂದು ಟೀಕಿಸಿದರು.

ಸಿಎಂ ಬೊಮ್ಮಾಯಿ ಅವರು ಕನಿಷ್ಟ ಪಕ್ಷ ನಮ್ಮನ್ನ ಸಂಪರ್ಕ ಮಾಡಿಲ್ಲ. ನಾನು ಭೇಟಿ ಮಾಡಲು ಹೋಗಿಲ್ಲ, ಕಾದು ನೋಡುತ್ತೇನೆ. ನಾನು ಯಾರನ್ನು ಸಂಪರ್ಕ ಮಾಡಿಲ್ಲ. ನಾಳೆ ನೂತನ ಸಚಿವ ಬಿ.ಸಿ.ಪಾಟೀಲ್ ನೆರೆ ಹಾಗೂ ಪ್ರವಾಹ ಪರಿಸ್ಥಿತಿ ಸಭೆ ಕರೆದಿದ್ದಾರೆ ಹೋಗುತ್ತೇನೆ. ಸದ್ಯ ಇರುವ ಆಯೋಗದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಯಾವುದೇ ನಿಗಮ ಮಂಡಳಿ ಬೇಡ. ನನಗೆ ಯಾವುದೇ ನಿಗಮ ಮಂಡಳಿಯ ಅವಶ್ಯಕತೆ ಇಲ್ಲ' ಎಂದು ಅವರು ನಿರಾಕರಿಸಿದರು.

`ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸ್ಥಾನ ನೀಡಲೇಬೇಕೆಂದು ಒತ್ತಾಯ ಮಾಡುತ್ತೇನೆ. ಇಲ್ಲವಾದರೆ ರಾಜ್ಯದ 45 ಲಕ್ಷ ಛಲವಾದಿ ಸಮುದಾಯದವರಿದ್ದಾರೆ. ಅದು ಬೇರೆ ಪಕ್ಷದ ಕಡೆಗೆ ಹೋಗಲಿದ್ದಾರೆ. ಮುಖ್ಯಮಂತ್ರಿಗಳು ವಿವೇಚನೆ ಮಾಡಿ ಸ್ಥಾನ ನೀಡಬೇಕು. ಮೋಸ, ವಂಚನೆ ಮತ್ತು ವಸೂಲಿಯಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿದೆ. ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಮೋಸವಾಯಿತು' ಎಂದು ನೆಹರೂ ಓಲೆಕಾರ್ ದೂರಿದರು.

`ಪಕ್ಷದಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದ್ದು, ಎಸ್ಸಿ-ಎಸ್ಟಿ ವರ್ಗದವರನ್ನ ಸಂಪೂರ್ಣ ಕಡೆಗಣನೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮುಂದುವರಿದ ಕೋಮಿನವರೆಗೆ ಅವಕಾಶಗಳು ಸಿಗುತ್ತಿವೆ. ಎಲ್ಲ ಅವಕಾಶಗಳನ್ನು ಲಿಂಗಾಯತರಿಗೆ ನೀಡಿದರೆ, ಉಳಿದವರು ಏನು ಮಾಡಬೇಕು. ಸಿಎಂ ಮತ್ತು ಬಿ.ಸಿ.ಪಾಟೀಲ್ ಇಬ್ಬರು ಒಂದೇ ಕೋಮಿಗೆ ಸೇರಿದವರು. ಇದರಿಂದ ಶೋಷಿತರಿಗೆ ಏನು ಲಾಭ ಎಂದು ಓಲೆಕಾರ್ ಪ್ರಶ್ನಿಸಿದರು.

`ಶಾಸಕ ನೆಹರೂ ಓಲೆಕಾರ್ ಹೇಳಿಕೆಯಿಂದ ಬಿಜೆಪಿಯಲ್ಲಿ ಬ್ಲಾಕ್‍ಮೇಲ್ ಜೊತೆಗೆ ಮೋಸ, ವಂಚನೆ, ವಸೂಲಿಯೂ ನಡೆಯುತ್ತಿದೆ ಎಂಬುದು ತಿಳಿದಂತಾಯಿತು. ಇವರ ಹೇಳಿಕೆಯಂತೆ `ದವಳಗಿರಿ ಸರಕಾರ'ದಲ್ಲಿ ಮಂತ್ರಿಗಿರಿಗಾಗಿ ವಸೂಲಿ ನಡೆದಿದೆ, ವಸೂಲಿ ಮಾಡಿದವರಾರು ಬಿಜೆಪಿ? ಸಿಎಂ ಅವರೇ, ಬಿಎಸ್‍ವೈ ಅವರೇ, ಅಥವಾ ದಿಲ್ಲಿ ಹೈಕಮಾಂಡ್‍ಗೆ ಕಪ್ಪ ಸಲ್ಲಿಸಲಾಗಿದೆಯೇ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News