ಸಂಪುಟ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ಇಲ್ಲ: ಬಿ.ವೈ ವಿಜಯೇಂದ್ರ

Update: 2021-08-05 12:41 GMT

ಬೆಂಗಳೂರು, ಆ. 5: `ಸಚಿವ ಸಂಪುಟದಲ್ಲಿ ನನಗೆ ಅವಕಾಶ ಸಿಕ್ಕಿಲ್ಲ ಎಂಬ ನೋವು, ಅಸಮಾಧಾನ ಯಾವುದು ಇಲ್ಲ' ಎಂದು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಯಡಿಯೂರಪ್ಪನವರ ಪುತ್ರನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ವರಿಷ್ಠರಿಗೆ ಷರತ್ತು ಹಾಕಲಾಗಿದೆ ಎಂಬುದು ಸುಳ್ಳು. ಬಿಎಸ್‍ವೈ ಅವರು ನನಗೆ ಸಚಿವ ಸ್ಥಾನ ಕೊಡಿಸಲು ಯಾರೊಬ್ಬರ ಮೇಲೆಯೂ ಒತ್ತಡವನ್ನು ಹೇರಿಲ್ಲ. ಇದೆಲ್ಲವೂ ಕೇವಲ ಊಹಾಪೋಹ ಅಷ್ಟೇ' ಎಂದು ಅಲ್ಲಗಳೆದರು.

`ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಲಕ್ಷಾಂತರ ಕಾರ್ಯಕರ್ತರಿದ್ದು, ಅವರಿಂದ ಪಕ್ಷ ಇಂದು ದೇಶದಲ್ಲಿ ಅಧಿಕಾರದಲ್ಲಿದೆ. ಹೀಗಿರುವಾಗ ನನ್ನನ್ನು ಮಂತ್ರಿ ಮಾಡಬೇಕೆಂದು ಯಡಿಯೂರಪ್ಪ ಒತ್ತಡ ಹೇರಿದ್ದಾರೆಂಬುದು ಆಧಾರರಹಿತ ಹಾಗೂ ಸುಳ್ಳು ಸುದ್ದಿ. ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ತನಗೆ ಸ್ಥಾನ ಸಿಕ್ಕಿಲ್ಲ ಎಂಬ ಯಾವುದೇ ಅಸಮಾಧಾನವೂ ನನಗಿಲ್ಲ' ಎಂದು ಅವರು ಸ್ಪಷ್ಟನೆ ನೀಡಿದರು.

ಪಕ್ಷದ ತೀರ್ಮಾನಕ್ಕೆ ಬದ್ಧ: `ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಪಕ್ಷದ ಉಪಾಧ್ಯಕ್ಷನಾಗಿದ್ದು ರಾಜ್ಯದಲ್ಲಿ ಸಂಘಟನೆ ಕೆಲಸ-ಕಾರ್ಯಗಳನ್ನು ಮಾಡಬೇಕಿದೆ. ಇಡೀ ರಾಜ್ಯದಲ್ಲಿ ವಿಜಯೇಂದ್ರ ಎಂದರೆ ಅದು ವರುಣಾ ಕ್ಷೇತ್ರ ಎಂದು ಗುರುತಿಸುತ್ತಾರೆ. ಬಿಜೆಪಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪ ನಮ್ಮದು' ಎಂದು ವಿಜಯೇಂದ್ರ ತಿಳಿಸಿದರು.

`ಮೇಕೆದಾಟು ಅಣೆಕಟ್ಟು ಯೋಜನೆ ನಮ್ಮ ಹಕ್ಕು. ಅದನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ' ಎಂದು ಈ ಹಿಂದೆಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದರು. ಅಣ್ಣಾಮಲೈ ಪ್ರತಿಭಟನೆ ರಾಜಕೀಯ ಪ್ರೇರಿತ. ರಾಜ್ಯ ಸರಕಾರ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಿದೆ' ಎಂದು ವಿಜಯೇಂದ್ರ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News