ಸ್ಮಶಾನಗಳಿಗೆ ಭೂಮಿ ಒದಗಿಸದ ಸರಕಾರದ ವಿರುದ್ಧ ಅರ್ಜಿ: ಕ್ರಮದ ಕುರಿತು ವರದಿ ಕೇಳಿದ ಹೈಕೋರ್ಟ್

Update: 2021-08-05 12:59 GMT

ಬೆಂಗಳೂರು, ಆ.5: ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮಗಳು ಹಾಗೂ ಪಟ್ಟಣಗಳಿಗೆ ಅಗತ್ಯ ಜಮೀನು ಮಂಜೂರು ಮಾಡುವ ಸಂಬಂಧ ನ್ಯಾಯಾಲಯ ಈ ಹಿಂದೆ ನೀಡಿರುವ ಆದೇಶದ ಅನುಸಾರ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ 1 ವಾರ ಕಾಲಾವಕಾಶ ನೀಡಿದೆ.

ರಾಜ್ಯದ ಹಲವು ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಶವಸಂಸ್ಕಾರ ನಡೆಸಲು ಸ್ಮಶಾನಗಳಿಲ್ಲ. ಹೀಗಾಗಿ ಅಗತ್ಯ ಭೂಮಿ ಮಂಜೂರು ಮಾಡಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಆರ್.ಟಿ.ನಗರದ  ಮಹಮ್ಮದ್ ಇಕ್ಬಾಲ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಅಗತ್ಯ ಜಮೀನು ಮಂಜೂರು ಮಾಡುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಸರಕಾರ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಒಂದು ವಾರದಲ್ಲಿ ವರದಿ ನೀಡುವಂತೆ ನಿರ್ದೇಶಿಸಿದೆ.

ಸರಕಾರದ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ ಸ್ಮಶಾನ ಜಾಗವಿಲ್ಲದ ಗ್ರಾಮಗಳು ಹಾಗೂ ಪಟ್ಟಣಗಳಿಗೆ ಅಗತ್ಯ ಜಮೀನು ಮಂಜೂರು ಮಾಡುವಂತೆ ಸರಕಾರಕ್ಕೆ ಸೂಚಿಸಿ ಹೈಕೋರ್ಟ್ ಆದೇಶಿಸಿರುವಂತೆ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ವರದಿ ಸಲ್ಲಿಸಲು 1 ವಾರ ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಪೀಠ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು. 
ಪ್ರಕರಣವೇನು: ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ 6 ಸಾವಿರಕ್ಕೂ ಅಧಿಕ ಗ್ರಾಮಗಳು ಹಾಗೂ 218 ಪಟ್ಟಣಗಳಿಗೆ ಅಗತ್ಯ ಜಮೀನು ಮಂಜೂರು ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. 2019ರ ಆ.23ರಂದು ಅರ್ಜಿ ಇತ್ಯರ್ಥಪಡಿಸಿದ್ದ ಪೀಠ, ಸ್ಮಶಾನ ಜಾಗವಿಲ್ಲದ ಗ್ರಾಮಗಳು ಮತ್ತು ಪಟ್ಟಣಗಳಿಗೆ 6 ತಿಂಗಳಲ್ಲಿ ಅಗತ್ಯ ಜಮೀನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ನಿರ್ದೇಶಿಸಿತ್ತು. 

ಆದರೆ, 2020ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಕೋರ್ಟ್ ಆದೇಶದಂತೆ ಸರಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕು ಹಾಗೂ ಆದೇಶ ಪಾಲಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News