ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ಸರಕಾರ ವಿಫಲ: ರಮೇಶ್ ಬಾಬು

Update: 2021-08-05 13:26 GMT

ಬೆಂಗಳೂರು, ಆ.5: ರಾಜ್ಯ ಬಿಜೆಪಿ ಸರಕಾರ ಮಂತ್ರಿ ಮಂಡಲ ರಚನೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗಿದೆ. ರಾಜ್ಯಕ್ಕೆ ಜಾತಿಯ ಸುಳ್ಳು ಮಾಹಿತಿ ನೀಡಿದ್ದಾರೆ. 30 ಜನರ ಸಚಿವ ಸಂಪುಟದಲ್ಲಿ 10 ಜನ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿದ್ದಾರೆ. ಮೂರನೇ ಒಂದು ಭಾಗ ಒಂದೇ ಸಮುದಾಯಕ್ಕೆ ನೀಡಿ ಇತರೆ ಸಮುದಾಯಗಳನ್ನು ಉದ್ದೇಶ ಪೂರ್ವಕವಾಗಿ ವಂಚಿಸಲಾಗಿದೆ. ಜೊತೆಗೆ 8 ಜನ ಸಚಿವರು ಮಾತ್ರ ಲಿಂಗಾಯತ ಸಮುದಾಯ ಎಂದು ಸುಳ್ಳು ಹೇಳಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ದೂರಿದ್ದಾರೆ.

ಹಿಂದೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಆ ಸಮುದಾಯದ ಇತರೆ ಯಾರಿಗೂ ಮಂತ್ರಿ ಸ್ಥಾನ ನೀಡದೆ ನೈತಿಕತೆ ಮತ್ತು ಮೌಲ್ಯಗಳನ್ನು ಪ್ರತಿಪಾದನೆ ಮಾಡಿದ್ದರು. ಆದರೆ ಬಸವರಾಜ ಬೊಮ್ಮಾಯಿ ಅವರು ತಮ್ಮನ್ನೂ ಸೇರಿದಂತೆ 10 ಮಂದಿಗೆ ಅವರ ಸಮುದಾಯಕ್ಕೆ ಅವಕಾಶ ನೀಡಿ ರಾಜ್ಯದ ಇತಿಹಾಸಕ್ಕೆ ಸಾಮಾಜಿಕ ನ್ಯಾಯಕ್ಕೆ ಮೋಸ ಎಸಗಿದ್ದಾರೆ ಎಂದು ಅವರು ಕಿಡಿಗಾರಿದ್ದಾರೆ.

ಬಿಜೆಪಿ ಸರಕಾರ ರಾಜ್ಯದ ಅಲ್ಪಸಂಖ್ಯಾತ, ಅತಿ ಸಣ್ಣ ಸಮುದಾಯ, ಶೋಷಿತ ಸಮುದಾಯ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂಚಿನ ಮೂಲಕ ಮೋಸ ಮಾಡಿದ್ದಾರೆ. ಸಚಿವ ಸಂಪುಟದ ಜಾತಿ ಹೆಸರಿನ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ. ರಾಜ್ಯದ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಒಂದೇ ಸಮುದಾಯಕ್ಕೆ ಯಾವಾಗಲೂ ಅವಕಾಶ ನೀಡಿರಲಿಲ್ಲ. ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಕೈ ಬಿಟ್ಟಿದ್ದು, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ರಮೇಶ್ ಬಾಬು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News