ರಾಮನಗರ: ಬಾಲ್ಯ ವಿವಾಹ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇಡಲಾಗುವುದು; ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್

Update: 2021-08-05 13:31 GMT

ರಾಮನಗರ, ಆ.5: 2021ರ ಸಾಲಿನ ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ 6 ಬಾಲ್ಯ ವಿವಾಹಗಳು ನಡೆದ ನಂತರ ವರದಿಯಾಗಿದ್ದು, ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲ್ಯ ವಿವಾಹ ನಡೆಯುವ ಮುನ್ನ ವಿಷಯದ ಮಾಹಿತಿ ನೀಡಿದರೆ ಹೆಚ್ಚು ಉಪಯುಕ್ತತೆಯಾಗಲಿದೆ. ಬಾಲ್ಯ ವಿವಾಹ ನಡೆಯುವ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಕೆ ತಿಳಿಸಿದರು.

ಗುರುವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಬಾಲ್ಯ ವಿವಾಹ ತಡೆಗಟ್ಟಲು ಸಮಿತಿ ಇರುತ್ತದೆ. ಸಮಿತಿಯವರು ತಮ್ಮ ಗ್ರಾಮದಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ನಿಯಮಿತವಾಗಿ ನಿಗವಹಿಸಬೇಕು ಇದರಿಂದ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದರು.

2019-20ರಲ್ಲಿ 95 ಬಾಲ್ಯ ವಿವಾಹಗಳು ವರದಿಯಾಗಿದ್ದು, 83 ತಡೆಯಲಾಗಿದೆ. 12 ಬಾಲ್ಯವಿವಾಹ ನಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2020-21ರಲ್ಲಿ 111 ಬಾಲ್ಯ ವಿವಾಹಗಳು ವರದಿಯಾಗಿದ್ದು, 99 ತಡೆಯಲಾಗಿದೆ. 12 ಬಾಲ್ಯವಿವಾಹ ನಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2021-22ರಲ್ಲಿ 50 ಬಾಲ್ಯ ವಿವಾಹಗಳು ವರದಿಯಾಗಿದ್ದು, 44 ತಡೆಯಲಾಗಿದೆ. 6 ಬಾಲ್ಯವಿವಾಹ ನಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಹೆಚ್ಚು ಅರಿವು ಮೂಡಿಸಿ ಎಂದು ಅವರು ಕರೆ ನೀಡಿದರು.

ರೈಲ್ವೆ ಕೆಲಸದಲ್ಲಿ ತೊಡಗಿದ್ದ 7 ಬಾಲ ಕಾರ್ಮಿಕರು ಇತ್ತೀಚೆಗೆ ಪತ್ತೆಯಾಗಿದ್ದು, ಮಕ್ಕಳನ್ನು ಕೆಲಸದಲ್ಲಿ ತೊಡಗಿಕೊಂಡಿದ್ದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಜೆ.ಜೆ.ಆಕ್ಟ್ ನಡಿ ದೂರು ದಾಖಲಿಸುವಂತೆ ಅವರು ತಿಳಿಸಿದರು.

ಎಚ್.ಐ.ವಿ. ಸೋಂಕಿತ ಮತ್ತು ಬಾದಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ತಿಂಗಳಿಗೆ 1,000 ರೂ.ಗಳಂತೆ ಅವರ ವೈಯುಕ್ತಿಕ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ಅನುದಾನ ನೀಡಲಾಗುತ್ತಿದ್ದು, 2019-20ನೇ ಸಾಲಿನಲ್ಲಿ 304 ಮಕ್ಕಳಿಗೆ, 2020-21ನೇ ಸಾಲಿನಲ್ಲಿ 276 ಮಕ್ಕಳಿಗೆ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.

ಬಾಲನ್ಯಾಯ ಮಂಡಳಿ ಜುಲೈ ಅಂತ್ಯದವರೆಗೆ 43 ಪ್ರಕರಣಗಳು ಬಾಕಿ ಇದ್ದು ಅವುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ, ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿರುವ ಸಂಸ್ಥೆಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಮುಂದೆ ವಿವಿಧ ಪ್ರಕರಣಗಳು ಹಾಗೂ ಮಕ್ಕಳ ಪುನರ್ ವಸತಿ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ, 32 ಪ್ರಕರಣಗಳು 2021-22ನೇ ಸಾಲಿನಲ್ಲಿ ಬಾಕಿ ಇದ್ದು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ತಿಳಿಸಿದರು.

ಕೋವಿಡ್ ಸೋಂಕಿತ, ಬಾದಿತ ಹಾಗೂ ಪಾಲನಾ ಮತ್ತು ರಕ್ಷಣೆಗೆ ಅಗತ್ಯವಿರುವ ಮಕ್ಕಳ ಗುರುತಿಸುವಿಕೆ ಹಾಗೂ ಪುನರ್ ವಸತಿ ಕಲ್ಪಿಸಲು ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಶಾಲೆಯಲ್ಲಿ ದಾಖಲಾಗಿರುವ ಮಕ್ಕಳು ಮತ್ತು ಪೆÇೀಷಕರಲ್ಲಿ ಕೋವಿಡ್ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಶಿಧರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News